ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದೆಲ್ಲೆಡೆ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದು, ಬಿಸಿಲಿನ ಬೇಗೆಯ ಜೊತೆಗೆ ಈಗ ವಾಯು ಮಾಲಿನ್ಯದ ಭೀತಿಯೂ ಜನರನ್ನು ಕಾಡುತ್ತಿದೆ. ಈ ತಿಂಗಳು ಪೂರ್ತಿ ಬಿಸಿಲಿನ ವಾತಾವರಣ ಮುಂದುವರಿಯುವ ಸೂಚನೆ ಇದ್ದು, ಇದರ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಗಣನೀಯವಾಗಿ ಕುಸಿತ ಕಂಡಿದೆ.
ಸಿಲಿಕಾನ್ ಸಿಟಿಯಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕ 172ಕ್ಕೆ ಏರಿಕೆಯಾಗಿದ್ದು, ಇದು ಆರೋಗ್ಯದ ದೃಷ್ಟಿಯಿಂದ ಆತಂಕಕಾರಿ ಮಟ್ಟದಲ್ಲಿದೆ.
ಉಡುಪಿ, ಮಂಗಳೂರು, ಬಳ್ಳಾರಿ ಮತ್ತು ಕಲಬುರ್ಗಿಯಲ್ಲೂ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಈ ಭಾಗಗಳಲ್ಲಿ AQI 150ರ ಗಡಿ ದಾಟಿದೆ.
ಕಲಬುರ್ಗಿ ಇಲ್ಲಿನ AQI ಸದ್ಯಕ್ಕೆ 141 ದಾಖಲಾಗಿದ್ದರೂ, ಇದು ಶೀಘ್ರದಲ್ಲೇ 200ರ ಗಡಿ ತಲುಪುವ ಭೀತಿ ಎದುರಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ, ಪ್ರಸ್ತುತ ದಾಖಲಾಗಿರುವ ಈ ಅಂಕಿಅಂಶಗಳು ಮಾನವನ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಉಸಿರಾಟದ ಸಮಸ್ಯೆ ಇರುವವರು ಮತ್ತು ಮಕ್ಕಳು ಜಾಗ್ರತೆ ವಹಿಸುವುದು ಅತ್ಯಗತ್ಯವಾಗಿದೆ.



