October 18, 2026
Sunday, October 18, 2026
spot_img

ಮಹಾಮಳೆಯ ಹೊಡೆತಕ್ಕೆ ಮಹಾರಾಷ್ಟ್ರ ತತ್ತರ: ಮುಂಬೈ ಜಲಾವೃತ, 5 ಮಂದಿ ಬ*ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಮುಂಬೈ, ಥಾಣೆ, ಪುಣೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜಲಾವೃತ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಳೆ ಸಂಬಂಧಿತ ಘಟನೆಗಳಲ್ಲಿ ಐವರು ಮೃತಪಟ್ಟಿದ್ದಾರೆ. ಹಲವು ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಯೂ ಅಸ್ತವ್ಯಸ್ತಗೊಂಡಿದೆ.

ಜಲಾವೃತ ರಸ್ತೆಗಳು, ವಾಹನ ಸಿಲುಕು

ಮುಂಬೈ, ವಸಾಯ್ ಹಾಗೂ ನವಿ ಮುಂಬೈ ಭಾಗಗಳಲ್ಲಿ ರಸ್ತೆಗಳು ನೀರಿನಿಂದ ತುಂಬಿ ವಾಹನಗಳು ಸಿಲುಕಿಕೊಂಡಿವೆ. ಕೆಲವೆಡೆ ಕಾರು ಮತ್ತು ಲಾರಿಗಳು ನೀರಿನಲ್ಲಿ ಮುಳುಗಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾಂಡಪ್ ಪ್ರದೇಶದಲ್ಲಿ ರಸ್ತೆ ಕುಸಿದ ಘಟನೆ ಕೂಡ ಆತಂಕ ಮೂಡಿಸಿದೆ.

ಮರಗಳು, ವಿದ್ಯುತ್ ಕಂಬಗಳಿಗೆ ಹಾನಿ

ಥಾಣೆ ಮತ್ತು ಪಾಲ್ಘರ್ ಭಾಗಗಳಲ್ಲಿ ಭಾರೀ ಗಾಳಿ-ಮಳೆಯಿಂದ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.

ರೆಡ್ ಅಲರ್ಟ್ ಘೋಷಣೆ

ಮುಂದಿನ 24 ಗಂಟೆಗಳಲ್ಲೂ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಭಾನುವಾರಕ್ಕೂ ರೆಡ್ ಅಲರ್ಟ್ ಘೋಷಿಸಿದೆ. ಅಗತ್ಯವಿಲ್ಲದಿದ್ದರೆ ಹೊರಗಡೆ ತೆರಳದಂತೆ ನಾಗರಿಕರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Must Read