ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್‌ನ ಮಹಾಫೈಟ್ ಕುತೂಹಲದ ಘಟ್ಟಕ್ಕೆ ಬಂದು ತಲುಪಿದೆ. ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ವಿಶ್ವಕಿರೀಟಕ್ಕಾಗಿ ಸೆಣಸಾಡಲಿವೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ನಡೆದ ‘ಕ್ಯಾಪ್ಟನ್ಸ್ ಪ್ರೆಸ್ ಕಾನ್ಫರೆನ್ಸ್’ನಲ್ಲಿ ಮಾತಿನ ಚಕಮಕಿ ಜೋರಾಗಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಕಿಚ್ಚು ಹಚ್ಚಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್, “ಅಹಮದಾಬಾದ್‌ನ ಬೃಹತ್ ಕ್ರೀಡಾಂಗಣದಲ್ಲಿ ನೆರೆಯಲಿರುವ ಲಕ್ಷಾಂತರ ಭಾರತೀಯ ಅಭಿಮಾನಿಗಳನ್ನು ಮೌನಗೊಳಿಸುವ ವಿಶ್ವಾಸ ನಮಗಿದೆ” ಎಂದು ಸವಾಲು ಹಾಕಿದರು.
ಸ್ಯಾಂಟ್ನರ್ ಅವರ ಈ ಹೇಳಿಕೆಯ ಬಗ್ಗೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಪ್ರಶ್ನೆ ಎದುರಾದಾಗ, ಅವರು ನಗುನಗುತ್ತಲೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. “ಸಬ್ ಹೀ ಸೇಮ್ ಲೈನ್ ಚಿಪ್ಕಾ ರಹೇ ಹೈ. ಕುಚ್ ತೋ ನಯಾ ಬೋಲೋ” (ಎಲ್ಲರೂ ಇದೇ ಲೈನ್ ಅನ್ನು ಕಾಪಿ ಮಾಡುತ್ತಿದ್ದಾರೆ, ಏನಾದರೂ ಹೊಸದನ್ನು ಹೇಳಿ) ಎಂದು ತಿರುಗೇಟು ನೀಡಿದರು.
ಸೂರ್ಯಕುಮಾರ್ ಹೀಗೆ ಹೇಳಲು ಕಾರಣವೂ ಇದೆ. ‘ಭಾರತೀಯ ಪ್ರೇಕ್ಷಕರನ್ನು ಮೌನಗೊಳಿಸುತ್ತೇವೆ’ ಎಂಬ ಈ ಸಂಪ್ರದಾಯವನ್ನು ಮೊದಲು ಶುರು ಮಾಡಿದ್ದು ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಅವರು ಈ ಮಾತನ್ನು ಹೇಳಿ ಗೆದ್ದಿದ್ದರು. ಆ ಬಳಿಕ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಸ್ಯಾಮ್ ಕರನ್ ಕೂಡ ಇದೇ ಡೈಲಾಗ್ ಹೊಡೆದಿದ್ದರು. ಈಗ ಫೈನಲ್‌ನಲ್ಲಿ ಸ್ಯಾಂಟ್ನರ್ ಕೂಡ ಹಳೆಯ ಡೈಲಾಗ್ ಅನ್ನೇ ಬಳಸಿದ್ದಕ್ಕೆ ಸೂರ್ಯಕುಮಾರ್ ಸಖತ್ ಆಗಿಯೇ ಕಾಲೆಳೆದಿದ್ದಾರೆ.



