March 8, 2026
Sunday, March 8, 2026
spot_img

ವಿಳಾಸ ಕೇಳುವ ನೆಪ.. ಚಿನ್ನದ ಸರಕ್ಕೆ ಕತ್ತರಿ: ಮೂವರು ಚೈನ್ ಸ್ನ್ಯಾಚರ್‌ಗಳ ಬಂಧನ, 112 ಗ್ರಾಂ ಚಿನ್ನ ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಳಾಸ ಕೇಳುವ ನೆಪದಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಸರಣಿ ಸರಗಳ್ಳತನ ಮಾಡುತ್ತಿದ್ದ ಕಳ್ಳರ ತಂಡವನ್ನು ಕುದೂರು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪ್ರಭು (39), ವಸಂತಿ (37) ಮತ್ತು ಜ್ಯೋತಿ (32) ಎಂದು ಗುರುತಿಸಲಾಗಿದೆ. ಈ ಗ್ಯಾಂಗ್ ಕೇವಲ ಒಂದೇ ದಿನದಲ್ಲಿ ಮೂರು ಕಡೆಗಳಲ್ಲಿ ಚಿನ್ನದ ಸರಗಳ್ಳತನ ಮಾಡಿ ಪೊಲೀಸರಿಗೆ ಸವಾಲಾಗಿದ್ದರು.

ಮಾರ್ಚ್ 3 ರಂದು ಕುದೂರು ಸಮೀಪದ ಕಳ್ಳಿಪಾಳ್ಯದಲ್ಲಿ ಈ ಘಟನೆ ನಡೆದಿತ್ತು. ಆರೋಪಿಗಳು ವ್ಯಾಗನಾರ್ ಕಾರಿನಲ್ಲಿ ಬಂದು, ಮುನೇಶ್ವರ ಸ್ವಾಮಿ ರಥೋತ್ಸವಕ್ಕೆ ತೆರಳುತ್ತಿದ್ದ ಭಕ್ತರನ್ನು ಅಡ್ಡಗಟ್ಟಿದ್ದರು. ದೇವಸ್ಥಾನಕ್ಕೆ ಹೋಗುವ ದಾರಿ ಕೇಳುವಂತೆ ನಟಿಸಿ, ಭಕ್ತರು ವಿಳಾಸ ಹೇಳುವ ಗಡಿಬಿಡಿಯಲ್ಲಿದ್ದಾಗ ಅವರ ಕೊರಳಿನಲ್ಲಿದ್ದ ಚಿನ್ನದ ಸರಗಳನ್ನು ಕಿತ್ತುಕೊಂಡು ಮಿಂಚಿನ ವೇಗದಲ್ಲಿ ಪರಾರಿಯಾಗುತ್ತಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕುದೂರು ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಬಂಧಿತರಿಂದ 112 ಗ್ರಾಂ ತೂಕದ ಮೂರು ಚಿನ್ನದ ಸರಗಳು ಮತ್ತು ಕೃತ್ಯಕ್ಕೆ ಬಳಸಿದ್ದ ವ್ಯಾಗನಾರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆಯ ವೇಳೆ ಈ ಗ್ಯಾಂಗ್ ಒಟ್ಟು 7 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !