ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಪ್ರಿಯಕರನ ಬಂಧನದ ವಿರುದ್ಧ ಮಹಿಳೆಯೊಬ್ಬಳು ವಿಶೇಷ ರೀತಿಯಲ್ಲಿ ಪ್ರತಿಭಟಿಸಿದ ಘಟನೆ ನಡೆದಿದೆ. ತನ್ನ ಪ್ರಿಯಕರನನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮಹಿಳೆ ಗ್ರಾಮದಲ್ಲಿದ್ದ ಮೊಬೈಲ್ ಟವರ್ ಏರಿ ಕುಳಿತಿದ್ದರಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಗೋಪಾಲ್‌ಗಂಜ್ ಜಿಲ್ಲೆಯ ಬಂಕಟ ಜಾಗಿರ್ದಾರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಮತ್ತು ಆಕೆಯ ಪ್ರಿಯಕರ ಪವನ್ ಚೌಹಾಣ್ ಇಬ್ಬರೂ ಅದೇ ಪ್ರದೇಶದ ನಿವಾಸಿಗಳೆಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ಮಹಿಳೆ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ:
ಮಹಿಳೆಯನ್ನು ಅಪಹರಿಸಿದ್ದಾನೆ ಎಂಬ ಅನುಮಾನದಿಂದ ಪೊಲೀಸರು ಪವನ್ ಚೌಹಾಣ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಈ ವಿಚಾರ ತಿಳಿದ ಮಹಿಳೆ ತನ್ನ ಪ್ರಿಯಕರನನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಗ್ರಾಮದಲ್ಲಿರುವ ಮೊಬೈಲ್ ಟವರ್ ಏರಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸ್ಥಳೀಯರು ಮಹಿಳೆಯನ್ನು ಕೆಳಗಿಳಿಸಲು ಹಲವು ಪ್ರಯತ್ನ ನಡೆಸಿದರು. ಕೊನೆಗೆ ಪೊಲೀಸರು ಪವನ್ ಚೌಹಾಣ್ ಅವರನ್ನು ಸ್ಥಳಕ್ಕೆ ಕರೆತಂದ ನಂತರ ಮಹಿಳೆ ಟವರ್‌ನಿಂದ ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.



