October 18, 2026
Sunday, October 18, 2026
spot_img

ಯುಪಿ ಮುಖ್ಯಮಂತ್ರಿ ಯೋಗಿಗೆ ಮದುವೆ ಇನ್ವಿಟೇಷನ್ ಕಳುಹಿಸಿದ ಕೇರಳ ಯುವತಿ; ಪತ್ರದಲ್ಲಿ ಏನಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣದ ಕೇರಳದಿಂದ ಉತ್ತರದ ಉತ್ತರ ಪ್ರದೇಶದವರೆಗೆ ತಲುಪಿರುವ ಒಂದು ಅಪರೂಪದ ಕಥೆಯಿದು. ಕೇರಳದ ಯುವತಿಯೊಬ್ಬರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ತಮ್ಮ ಸ್ವಂತ ಅಣ್ಣನೆಂದು ಭಾವಿಸಿ, ತಮಗೆ ಆಶೀರ್ವಾದ ಮಾಡುವಂತೆ ಕೋರಿ ಎರಡು ಪುಟಗಳ ಪತ್ರ ಹಾಗೂ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕಳುಹಿಸಿದ್ದಾರೆ.

ಕೇರಳದ ಆಲುವಾದಲ್ಲಿರುವ ಗ್ರೀನ್ ಪಾರ್ಕ್ ಕನ್ವೆನ್ಷನ್ ಸೆಂಟರ್‌ನಲ್ಲಿ ಡಿಸೆಂಬರ್ 20 ರಂದು ರಾಹುಲ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಅರುಂಧತಿ ಎಂಬ ವಧು ಈ ಅಪರೂಪದ ಆಹ್ವಾನ ಕಳುಹಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರನ್ನು ಕೇವಲ ಒಬ್ಬ ರಾಜಕೀಯ ನಾಯಕನಾಗಿ ನೋಡದೆ, ತಮ್ಮ ಜೀವನದ ಆದರ್ಶ ಹಾಗೂ ಹಿರಿಯ ಸಹೋದರನ ಸ್ಥಾನದಲ್ಲಿ ಇರಿಸಿ ಅವರು ಈ ಪತ್ರ ಬರೆದಿದ್ದಾರೆ.

ಜೀವನವನ್ನೇ ಬದಲಿಸಿದ ಯೋಗಿ ಆದಿತ್ಯನಾಥ್ ವಿಡಿಯೋ

ತಮ್ಮ ಬಾಲ್ಯದ ದಿನಗಳ ಆಂದೋಲನವನ್ನು ಪತ್ರದಲ್ಲಿ ನೆನಪಿಸಿಕೊಂಡಿರುವ ಅರುಂಧತಿ, ತಮಗೆ ಸಣ್ಣ ಪುಟ್ಟ ವಿಷಯಗಳಿಗೂ ಕಣ್ಣೀರು ಹಾಕುವ ಅಭ್ಯಾಸವಿತ್ತು. ಭಾವನಾತ್ಮಕವಾಗಿರುವುದು ದೌರ್ಬಲ್ಯ, ಬಲಿಷ್ಠರಾಗಿರುವವರು ಕಣ್ಣೀರು ಹಾಕಬಾರದು ಎಂದು ಗೆಳೆಯರು ಹೇಳುತ್ತಿದ್ದಾಗ ತಮಗೆ ತಮ್ಮದೇ ಸ್ವಭಾವದ ಬಗ್ಗೆ ಕೀಳರಿಮೆ ಮೂಡುತ್ತಿತ್ತು ಎಂದು ಬರೆದಿದ್ದಾರೆ.

ಆದರೆ, ಒಮ್ಮೆ ಅವರ ಸೋದರಸಂಬಂಧಿಯೊಬ್ಬರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾರ್ವಜನಿಕ ಭಾಷಣವೊಂದರಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದ ವಿಡಿಯೋವನ್ನು ತೋರಿಸಿದ್ದರು. “ನೋಡು, ಇಷ್ಟು ಬಲಿಷ್ಠವಾಗಿರುವ ನಾಯಕರೂ ಕೂಡ ಅಷ್ಟೇ ಸೂಕ್ಷ್ಮ ಮನಸ್ಸಿನವರಾಗಿರಬಹುದು. ಕಣ್ಣೀರು ಹಾಕುವುದು ದೌರ್ಬಲ್ಯದ ಲಕ್ಷಣವಲ್ಲ” ಎಂದು ಅರುಂಧತಿಗೆ ಧೈರ್ಯ ತುಂಬಿದ್ದರು. ಆ ಒಂದು ವಿಡಿಯೋ ಅರುಂಧತಿ ಅವರ ಯೋಚನಾ ಲಹರಿಯನ್ನೇ ಸಂಪೂರ್ಣವಾಗಿ ಬದಲಾಯಿಸಿತು.

ಪತ್ರದಲ್ಲಿ ಏನಿದೆ?

“ನನಗೆ ನನ್ನ ಮೇಲೆಯೇ ಅನುಮಾನ ಮೂಡಿದಾಗಲೆಲ್ಲಾ ನಿಮ್ಮ ಜೀವನದ ಪಯಣ ನನಗೆ ಮುಂದೆ ಸಾಗಲು ಸ್ಫೂರ್ತಿ ನೀಡುತ್ತದೆ. ಭಾವನೆಗಳನ್ನು ಹತ್ತಿಕ್ಕುವುದರಲ್ಲಿ ನಿಜವಾದ ಶಕ್ತಿ ಇಲ್ಲ, ಬದಲಾಗಿ ಬಿದ್ದ ಮೇಲೆ ಮತ್ತೆ ಎದ್ದು ನಿಲ್ಲುವುದು, ಸವಾಲುಗಳನ್ನು ಧೈರ್ಯದಿಂದ ಎದುರಿಸುವುದು ಮತ್ತು ನಮ್ಮ ಜವಾಬ್ದಾರಿಗಳನ್ನು ನಿಭಾಯಿಸುವುದೇ ನಿಜವಾದ ಶಕ್ತಿ ಎಂಬುದನ್ನು ನಾನು ನಿಮ್ಮನ್ನು ನೋಡಿ ಕಲಿತಿದ್ದೇನೆ” ಎಂದು ಅರುಂಧತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮುಂದುವರಿದು, “ನೀವು ನನಗೆ ಕೇವಲ ಒಬ್ಬ ನಾಯಕರಲ್ಲ. ನನ್ನ ಜೀವನಕ್ಕೆ ಧೈರ್ಯ ಮತ್ತು ಸ್ಫೂರ್ತಿ ನೀಡಿದ ನನ್ನ ಸ್ವಂತ ಅಣ್ಣನ ಸ್ಥಾನದಲ್ಲಿ ನಿಮ್ಮನ್ನು ನೋಡುತ್ತಿದ್ದೇನೆ” ಎಂದು ಭಾವುಕರಾಗಿದ್ದಾರೆ.

ಮುಖ್ಯಮಂತ್ರಿಗಳ ಕಾರ್ಯದೊತ್ತಡದ ಬಗ್ಗೆ ಅರಿವಿರುವ ಅರುಂಧತಿ, “ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ನೀವು ನನ್ನ ಮದುವೆಗೆ ಬಂದರೆ ಅದು ನಮಗೆ ಸಿಗುವ ಬಹುದೊಡ್ಡ ಗೌರವ. ಒಂದು ವೇಳೆ ಬರಲು ಸಾಧ್ಯವಾಗದಿದ್ದರೂ, ನಿಮ್ಮ ಕಡೆಯಿಂದ ಬರುವ ಒಂದು ಸಣ್ಣ ಆಶೀರ್ವಾದದ ಸಂದೇಶ ಹಾಗೂ ಶುಭ ಹಾರೈಕೆ ನಮಗೆ ಅತ್ಯಂತ ಅಮೂಲ್ಯವಾಗಿರುತ್ತದೆ” ಎಂದು ಪತ್ರ ಮುಗಿಸಿದ್ದಾರೆ. ಈ ಪತ್ರ ಸದ್ಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರಿ ವೈರಲ್ ಆಗುತ್ತಿದೆ.

Must Read