ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯ ಯುದ್ಧ ಕಾರ್ಮೋಡ ನಡುವೆ ಭಾರತವು ಕೊಚ್ಚಿ ಬಂದರಿನಲ್ಲಿ ಇರಾನಿನ ಹಡಗಿಗೆ ಡಾಕಿಂಗ್ ಮಾಡಲು ಅನುಮತಿ ನೀಡಿದ ಕುರಿತು ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಾಹಿತಿ ನೀಡಿದರು.
ಫೆಬ್ರವರಿ 28ರಂದು ಇರಾನ್ ಕಡೆಯವರು ಮೂರು ಹಡಗುಗಳಿಗೆ ಭಾರತೀಯ ಬಂದರುಗಳಲ್ಲಿ ಡಾಕಿಂಗ್ ಮಾಡಲು ಅನುಮತಿ ಕೋರಿದ್ದರು. ಮಾರ್ಚ್ 1 ರಂದು ಅವರಿಗೆ ಅನುಮತಿ ನೀಡಲಾಯಿತು. ಐಆರ್ ಐಎಸ್ ಲಾವನ್ ಮಾರ್ಚ್ 4 ರಂದು ಕೊಚ್ಚಿಯಲ್ಲಿ ಡಾಕಿಂಗ್ ಮಾಡಿತು. ಅದರಲ್ಲಿದ್ದ ಸುಮಾರು 183 ಸಿಬ್ಬಂದಿ ಪ್ರಸ್ತುತ ಭಾರತೀಯ ನೌಕಾ ಸೌಲಭ್ಯಗಳಲ್ಲಿ ಇದ್ದಾರೆ . ಇದು ಮಾನವೀಯ ದೃಷ್ಟಿಯಿಂದ ಸರಿಯಾದ ಕ್ರಮ ಎಂದು ನಾವು ನಂಬುತ್ತೇವೆ. ಈ ಮಾನವೀಯ ಸಹಾಯಕ್ಕಾಗಿ ಇರಾನ್ ವಿದೇಶಾಂಗ ಸಚಿವರು ತಮ್ಮ ದೇಶದ ಪರವಾಗಿ ಧನ್ಯವಾದ ತಿಳಿಸಿದ್ದಾರೆ ಎಂದು ಹೇಳಿದರು.
ಭಾರತದ ಈ ಮಾನವೀಯ ಕಾರ್ಯಕ್ಕಾಗಿ ಇರಾನ್ ವಿದೇಶಾಂಗ ಸಚಿವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಎಂದ ತಿಳಿಸಿದ ಅವರು, ಐಆರ್ ಐಎಸ್ ಲಾವನ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ತಪಾಸಣೆ ಮತ್ತು ಮಾರ್ಗದರ್ಶನಕ್ಕಾಗಿ ತುರ್ತು ಡಾಕಿಂಗ್ ಅನ್ನು ಕೋರಲಾಗಿತ್ತು. ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಫ್ಲೀಟ್ ರಿವ್ಯೂ ಮತ್ತು ಮಿಲನ್ 2026 ಬಹುರಾಷ್ಟ್ರೀಯ ನೌಕಾ ವ್ಯಾಯಾಮದಲ್ಲಿ ಈ ಹಡಗು ಭಾಗವಹಿಸಿತ್ತು ಎಂದು ಅವರು ಹೇಳಿದರು.
ಆದರೆ ಇರಾನ್‌ನ ಮತ್ತೊಂದು ಯುದ್ಧನೌಕೆ ಐಆರ್ ಐಎಸ್ ದೇನಾ ಅದೇ ದಿನ ಹಿಂದೂ ಮಹಾಸಾಗರದಲ್ಲಿ ಮುಳುಗಿದೆ. ಈ ನೌಕೆಯಲ್ಲಿದ್ದ ಸುಮಾರು 87 ಶವಗಳನ್ನು ಶ್ರೀಲಂಕಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 32 ನಾವಿಕರನ್ನು ರಕ್ಷಿಸಿದ್ದಾರೆ. ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಗ್ಯಾಲೆಗೆ ಕರೆದೊಯ್ಯಲಾಗಿದೆ. ಇದರಲ್ಲಿದ್ದ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದರು.



