March 9, 2026
Monday, March 9, 2026
spot_img

ಎತ್ತಿನಹೊಳೆ ಯೋಜನೆ ಆಮೆಗತಿಯಲ್ಲಿ ಸಾಗಲು ರಾಜ್ಯ ಸರ್ಕಾರದ ನಿರ್ಲಕ್ಷವೇ ಕಾರಣ: ಹೆಚ್. ಡಿ. ದೇವೇಗೌಡ ಟೀಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರದ ನಿರ್ಲಕ್ಷದಿಂದ ಎತ್ತಿನಹೊಳೆ ಯೋಜನೆ ಆಮೆ ಗತಿಯಲ್ಲಿ ಸಾಗುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರಿಂದು ರಾಜ್ಯಸಭೆಯಲ್ಲಿ ಕಿಡಿಕಾರಿದ್ದಾರೆ.

ಬಜೆಟ್‌ ಅಧಿವೇಶನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎತ್ತಿನಹೊಳೆ, ಮೇಕೆದಾಟು ಯೋಜನೆಗಳ ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ. ಅದನ್ನು ಮರೆಮಾಚಿಕೊಳ್ಳಲು ಕೇಂದ್ರವನ್ನು ದೂರುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ವು ಎತ್ತಿನಹೊಳೆ ಯೋಜನೆ ಕಾರ್ಯಗತ ಮಾಡುವಲ್ಲಿ ತಪ್ಪುಗಳನ್ನು ಮಾಡಿದೆ. ಪರಿಸರಕ್ಕೆ ಧಕ್ಕೆ ತಂದಿದೆ ಹಾಗೂ ಅನೇಕ ಕಾನೂನು, ನಿಯಮಗಳನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪ ಮಾಡಿದರು.

ಈ ಯೋಜನೆಗೆ ಬಿಜೆಪಿ ಸರಕಾರದ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು. ಆಗ ಜಗದೀಶ್‌ ಶೆಟ್ಟರ್‌ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆಗ ಆ ಯೋಜನೆಯ ಅಂದಾಜು ವೆಚ್ಚ 8 ಸಾವಿರ ಕೋಟಿ ರೂಪಾಯಿ. ಈಗ ಅದು 33 ಸಾವಿರ ಕೋಟಿ ರೂ. ಮೀರಿದೆ. ಈವರೆಗೂ ಒಂದು ಹನಿ ನೀರು ಕೂಡ ಹರಿದಿಲ್ಲ. ಆ ಯೋಜನೆ ಕಾರ್ಯಗತ ಆಗುತ್ತಿರುವ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ಹತ್ತಿರದಲ್ಲಿರುವ ಅರಸೀಕರೆಗೇ ನೀರು ಬಂದಿಲ್ಲ. ಈ ಬಗ್ಗೆ ನಾನು ಪುಟಗಟ್ಟಲೆ ಮಾಹಿತಿ ಇಟ್ಟುಕೊಂಡು ಮಾತನಾಡಬಲ್ಲೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮೇಕೆದಾಟು ಯೋಜನೆಗೂ ರಾಜ್ಯ ಸರಕಾರವೇ ಅಡ್ಡಿಯಾಗಿದೆ. ಈ ಯೋಜನೆ ಕಾರ್ಯಗತವಾಗುವ ಪ್ರಸ್ತಾವಿತ ಜಾಗ ನನಗೆ ಗೊತ್ತು. ಒಂದು ಕಡೆ ಆನೆ ಕಾರಿಡಾರ್‌, ಮತ್ತೊಂಡೆ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಇದೆ. ಪ್ರತಿದಿನವೂ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷದಿಂದ ಅಮಾಯಕರು ಬಲಿ ಆಗುತ್ತಿದ್ದಾರೆ. ಇದನ್ನು ತಡೆಯಲು ರಾಜ್ಯ ಸರಕಾರಕ್ಕೆ ಆಗಿಲ್ಲ ಎಂದು ಮಾಜಿ ಪ್ರಧಾನಿಗಳು ಆರೋಪಿಸಿದರು.

ಪ್ರತೀ ದಿನವೂ ಈ ಸಂಘರ್ಷ ನಡೆಯುತ್ತಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ತರೀಕೆರೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನೆಗಳು ಬೆಳೆಗಳನ್ನು ನಾಶ ಮಾಡುತ್ತಿವೆ ಹಾಗೂ ತೋಟಗಳಲ್ಲಿ ದುಡಿಮೆ ಮಾಡುವ ರೈತರನ್ನು ಕೊಲ್ಲುತ್ತಿವೆ. ಇದನ್ನು ತಪ್ಪಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿಲ್ಲ ಎಂದು ಅವರು ದೂರಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !