ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಸೂಪರ್ ಲೀಗ್ (ISL) 2026-27ರ ಸಾಲಿನಲ್ಲಿ ಫುಟ್ಬಾಲ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ದಕ್ಷಿಣ ಭಾರತದ ಪೈಪೋಟಿ ಮತ್ತೊಮ್ಮೆ ರಂಗೇರಲು ವೇದಿಕೆ ಸಿದ್ಧವಾಗಿದೆ. ರಾಜಧಾನಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅ. 17 ರ ಶನಿವಾರ ರಾತ್ರಿ 7:30 ಕ್ಕೆ ಜರುಗಲಿರುವ ಹೈ-ಪ್ರೊಫೈಲ್ ಪಂದ್ಯದಲ್ಲಿ ಹೋಮ್ ಟೀಮ್ ಬೆಂಗಳೂರು ಎಫ್ಸಿ (BFC) ಮತ್ತು ಚೆನ್ನೈಯಿನ್ ಎಫ್ಸಿ ತಂಡಗಳು ಮುಖಾಮುಖಿಯಾಗಲಿವೆ.
ಗೆಲುವಿನ ಉತ್ಸಾಹದಲ್ಲಿ ಬೆಂಗಳೂರು
ಟೂರ್ನಿಯ ತನ್ನ ಮೊದಲ ಆರಂಭಿಕ ಪಂದ್ಯದಲ್ಲೇ ಸ್ಪೋರ್ಟಿಂಗ್ ಕ್ಲಬ್ ದೆಹಲಿ ವಿರುದ್ಧ 3-2 ಗೋಲುಗಳ ರೋಚಕ ಜಯದೊಂದಿಗೆ ಖಾತೆ ತೆರೆದಿರುವ ಬೆಂಗಳೂರು ಎಫ್ಸಿ ತಂಡವು ಅದೇ ಅದ್ಭುತ ಲಯವನ್ನು ತನ್ನ ತವರು ಮೈದಾನದಲ್ಲೂ ಮುಂದುವರಿಸುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ತನ್ನ ಹಿಂದಿನ ಪಂದ್ಯದಲ್ಲಿ ಬಲಿಷ್ಠ ಎಫ್ಸಿ ಗೋವಾ ವಿರುದ್ಧ 1-1 ಗೋಲುಗಳ ಡ್ರಾ ಸಾಧಿಸಿ ಅಂಕ ಹಂಚಿಕೊಂಡಿರುವ ಚೆನ್ನೈಯಿನ್ ಎಫ್ಸಿ, ಈ ಬಾರಿ ಬೆಂಗಳೂರಿನಲ್ಲಿ ಪೂರ್ಣ 3 ಅಂಕಗಳನ್ನು ಲೂಟಿ ಮಾಡುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ.
ಕೊನೆಯ ಕ್ಷಣದವರೆಗಿನ ರೋಮಾಂಚಕ ಹೋರಾಟ
ತನ್ನ ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡವು ಆಕ್ರಮಣಕಾರಿ ಆಟದ ಮೂಲಕ ಕ್ರೀಡಾಭಿಮಾನಿಗಳ ಮನಗೆದ್ದಿತ್ತು. ತಂಡದ ತಾರೆ ಬೋರ್ಜಾ ಮಾರ್ಟಿನೆಜ್ ಭರ್ಜರಿ ಎರಡು ಗೋಲುಗಳನ್ನು ಸಿಡಿಸಿ ಅಬ್ಬರಿಸಿದ್ದರು. ವಿಶೇಷವಾಗಿ 75ನೇ ನಿಮಿಷದಲ್ಲಿ ಅವರು ಬಾರಿಸಿದ ಗೋಲು ತಂಡಕ್ಕೆ ಆನೆಬಲ ತಂದಿತ್ತು. ತದನಂತರ ಪಂದ್ಯ ಮುಗಿಯಲು ಕೇವಲ ಒಂದು ನಿಮಿಷ ಬಾಕಿ ಇದ್ದಾಗ ಮೆನ್ನೊ ಕೋಚ್ ಅವರು ಹೆಡರ್ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ತಳ್ಳುವ ಮೂಲಕ ಬಿಎಫ್ಸಿಗೆ ಅದ್ಭುತ ವಿಜಯ ತಂದುಕೊಟ್ಟಿದ್ದರು.
ಡಿಫೆನ್ಸ್ ವಿಭಾಗ ಇನ್ನು ಬಲಿಷ್ಠವಾಗಬೇಕು
ಮುಂಬರುವ ಪಂದ್ಯದ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಮುಖ್ಯ ಕೋಚ್ ಪೆಪ್ ಮುನೋಝ್, ಮೊದಲ ಪಂದ್ಯದಲ್ಲಿ ದೆಹಲಿ ತಂಡ ನಮಗೆ ಅತ್ಯಂತ ಕಠಿಣ ಸವಾಲು ನೀಡಿತ್ತು. ವೈಯಕ್ತಿಕ ಪೈಪೋಟಿಗಳಲ್ಲಿ ನಮ್ಮ ಆಟಗಾರರು ಇನ್ನು ಬಲವಾಗಿ ಹೋರಾಡಬೇಕಿದೆ ಮತ್ತು ರಕ್ಷಣಾ ವಿಭಾಗದಲ್ಲಿನ ಸಣ್ಣಪುಟ್ಟ ಲೋಪಗಳನ್ನು ತಕ್ಷಣವೇ ಸರಿಪಡಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಚೆನ್ನೈಯಿನ್ ಎಫ್ಸಿ ತಂಡವು ಯಾವುದೇ ಕ್ಷಣದಲ್ಲೂ ತಿರುಗಿಬೀಳುವ ಸಾಮರ್ಥ್ಯ ಹೊಂದಿರುವ ಎದುರಾಳಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತಿಹಾಸ ಸೃಷ್ಟಿಸಲಿದೆಯೇ ಹಳೆಯ ಸೇಡು?
ಉಭಯ ತಂಡಗಳ ನಡುವಿನ ಪೈಪೋಟಿಗೆ ಸುದೀರ್ಘ ಇತಿಹಾಸವಿದೆ. 2017-18 ರ ಐಎಸ್ಎಲ್ ಫೈನಲ್ ಪಂದ್ಯದಲ್ಲಿ ಇದೇ ಕಂಠೀರವ ಮೈದಾನದಲ್ಲಿ ಚೆನ್ನೈಯಿನ್ ಎಫ್ಸಿ ತಂಡವು ಬೆಂಗಳೂರನ್ನು 3-2 ಗೋಲುಗಳಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆದರೆ, ಕಳೆದ ಸೀಸನ್ನ ಕೊನೆಯ ಪಂದ್ಯದಲ್ಲಿ ಬಿಎಫ್ಸಿಯ ಸೆರ್ಟೊ ವೊರ್ನಿಲೆನ್ ಕೋಮ್ 89ನೇ ನಿಮಿಷದಲ್ಲಿ ಮ್ಯಾಜಿಕ್ ಗೋಲು ಬಾರಿಸಿ 2-1 ರಿಂದ ಚೆನ್ನೈಗೆ ತಿರುಗೇಟು ನೀಡಿದ್ದರು. ಈ ಬಾರಿಯ ಪಂದ್ಯದ ಮತ್ತೊಂದು ವಿಶೇಷವೆಂದರೆ, ಚೆನ್ನೈಯಿನ್ ತಂಡದ ಪ್ರಮುಖ ರಕ್ಷಣಾ ಆಟಗಾರ ನಾಮ್ಗ್ಯಾಲ್ ಭುಟಿಯಾ ಅವರು ತಮ್ಮ ಹಳೆಯ ಕ್ಲಬ್ ಆದ ಬೆಂಗಳೂರು ಎಫ್ಸಿ ವಿರುದ್ಧವೇ ತಂತ್ರ ರೂಪಿಸಿ ಕಣಕ್ಕಿಳಿಯುತ್ತಿರುವುದು ಪಂದ್ಯದ ಕುತೂಹಲವನ್ನು ಇನ್ನು ಹೆಚ್ಚಿಸಿದೆ.



