ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ತಮಗೆ ಬಾಡಿ ಶೇಮಿಂಗ್ ಆಗಿದೆ ಎಂದು ನಟಿ ಗೀತಾ ಭಾರತಿ ಭಟ್ ಹೇಳಿಕೆ ನೀಡಿದ ನಂತರ, ಚಿತ್ರದ ನಿರ್ಮಾಪಕಿ ಮಿಲನಾ ನಾಗರಾಜ್ ಮತ್ತು ನಿರ್ದೇಶಕ ಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾದಲ್ಲಿನ ಒಂದು ಡೈಲಾಗ್ ಬಗ್ಗೆ ಗೀತಾ ಅಸಮಾಧಾನ ವ್ಯಕ್ತಪಡಿಸಿದ್ದರೆ, ಅದಕ್ಕೆ ಚಿತ್ರತಂಡದಿಂದ ಸ್ಪಷ್ಟನೆ ನೀಡಲಾಗಿದೆ.
ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಕೃಷ್ಣ, ಆ ಡೈಲಾಗ್ ಯಾರನ್ನೂ ಅವಮಾನಿಸುವ ಉದ್ದೇಶದಿಂದ ಬರೆಯಲಾಗಿಲ್ಲ ಎಂದು ಹೇಳಿದ್ದಾರೆ. “ಅದು ಕೇವಲ ಹಾಸ್ಯಭರಿತವಾಗಿ ಬರೆಯಲಾದ ರೈಮಿಂಗ್ ಡೈಲಾಗ್. ಬಾಡಿ ಶೇಮಿಂಗ್ ಮಾಡುವ ಉದ್ದೇಶ ಇರಲಿಲ್ಲ, ಎಂದು ಹೇಳಿದ್ದಾರೆ.
ಇದನ್ನೂ ಓದಿ:
ನಿರ್ಮಾಪಕಿ ಮಿಲನಾ ನಾಗರಾಜ್ ಕೂಡ ಈ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿನಿಮಾದಲ್ಲಿ ನಟಿಸುವ ಮೊದಲು ಕಲಾವಿದರಿಗೆ ಕಥೆ ಮತ್ತು ಪಾತ್ರದ ಬಗ್ಗೆ ವಿವರ ನೀಡಲಾಗುತ್ತದೆ ಎಂದು ಹೇಳಿದರು. “ಯಾವುದನ್ನೂ ಮುಚ್ಚಿಟ್ಟು ಮಾಡಲಾಗುವುದಿಲ್ಲ. ದೃಶ್ಯದಲ್ಲಿ ಅಭಿನಯಿಸಿದ ನಂತರ ಇದೀಗ ಆ ಬಗ್ಗೆ ತಕರಾರು ತೆಗೆದುಕೊಳ್ಳುವುದು ಸರಿಯಲ್ಲ, ಅಷ್ಟಿದ್ರೆ ಸಿನಿಮಾನೇ ಒಪ್ಪಿಕೊಳ್ಳಬಾರದಿತ್ತು ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ಇದೇ ವೇಳೆ, ಗೀತಾ ಭಾರತಿ ಭಟ್ ಅವರು ಧಾರಾವಾಹಿಗಳಲ್ಲಿಯೂ ಇಂತಹ ಕಥಾವಸ್ತು ಹೊಂದಿರುವ ಪಾತ್ರಗಳಲ್ಲಿ ಅಭಿನಯಿಸಿದ್ದನ್ನು ಕೃಷ್ಣ ಉಲ್ಲೇಖಿಸಿದರು. ಚಿತ್ರದ ಕಥಾನಾಯಕನ ದೃಷ್ಟಿಕೋನವನ್ನು ತೋರಿಸಲು ಆ ಡೈಲಾಗ್ ಬಳಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.



