June 16, 2026
Tuesday, June 16, 2026
spot_img

ಜೈಲಲ್ಲಿದ್ದರೂ ತಗ್ಗಿಲ್ಲ ಚಾಲೆಂಜಿಂಗ್ ಸ್ಟಾರ್ ಕ್ರೇಜ್; ಜೂನ್ 19ಕ್ಕೆ ರಾಜ್ಯಾದ್ಯಂತ ‘ಕಲಾಸಿಪಾಳ್ಯ’ ಭರ್ಜರಿ ರೀ-ರಿಲೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ಯಾಂಡಲ್‌ವುಡ್‌ನಲ್ಲಿ ಹಳೆಯ ಸೂಪರ್ ಹಿಟ್ ಚಿತ್ರಗಳನ್ನು ಮರು-ಬಿಡುಗಡೆ ಮಾಡುವ ಟ್ರೆಂಡ್ ಜೋರಾಗಿಯೇ ನಡೆಯುತ್ತಿದೆ. ನಟ ದರ್ಶನ್ ಪ್ರಸ್ತುತ ಜೈಲಿನಲ್ಲಿದ್ದರೂ ಅವರ ಸಿನಿಮಾಗಳ ಮೇಲಿರುವ ಅಭಿಮಾನಿಗಳ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಈ ಹಿಂದೆ ‘ಮೆಜೆಸ್ಟಿಕ್’, ‘ಶಾಸ್ತ್ರಿ’, ‘ಕರಿಯ’ ಹಾಗೂ ‘ನವಗ್ರಹ’ ಚಿತ್ರಗಳು ರೀ-ರಿಲೀಸ್ ಆಗಿ ಧೂಳೆಬ್ಬಿಸಿದ್ದವು. ಅದೇ ಹಾದಿಯಲ್ಲಿ ಈಗ ದರ್ಶನ್ ವೃತ್ತಿಜೀವನಕ್ಕೆ ಮಾಸ್ ಇಮೇಜ್ ತಂದುಕೊಟ್ಟಿದ್ದ ‘ಕಲಾಸಿಪಾಳ್ಯ’ ಸಿನಿಮಾ ಜೂನ್ 19 ರಂದು ಬೆಳ್ಳಿಪರದೆಗೆ ಮರಳಲು ಸಜ್ಜಾಗಿದೆ.

ಥಿಯೇಟರ್‌ಗಳಲ್ಲಿ ‘ಕೆಂಚ’ನ ಅಬ್ಬರ:

ಸಿನಿಮಾ ಬಿಡುಗಡೆಗೆ ಇನ್ನು ಕೆಲ ದಿನಗಳು ಬಾಕಿ ಇರುವಾಗಲೇ ಬೆಂಗಳೂರಿನ ಪ್ರಸಿದ್ಧ ಪ್ರಸನ್ನ ಚಿತ್ರಮಂದಿರ ಸೇರಿದಂತೆ ಹಲವೆಡೆ ಜೂನ್ 19ರ ಶುಕ್ರವಾರದ ಮುಂಜಾನೆ 6 ಗಂಟೆಯ ಫ್ಯಾನ್ಸ್ ಶೋಗಳ ಟಿಕೆಟ್‌ಗಳು ಈಗಾಗಲೇ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ. ಇನ್ನು, ಥಿಯೇಟರ್‌ಗಳ ಮುಂದೆ ದರ್ಶನ್ ಅವರ ಬೃಹತ್ ಕಟೌಟ್ ಹಾಗೂ ಬ್ಯಾನರ್‌ಗಳನ್ನು ನಿಲ್ಲಿಸಲು ಅಭಿಮಾನಿ ಬಳಗ ಅದ್ಧೂರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ:

22 ವರ್ಷಗಳ ಬಳಿಕ ರೀ-ರಿಲೀಸ್:

ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಹಾಗೂ ನಿರ್ಮಾಪಕ ರಾಮು ನಿರ್ಮಾಣದಲ್ಲಿ ಮೂಡಿಬಂದಿದ್ದ ಈ ಆಕ್ಷನ್ ಕಮರ್ಷಿಯಲ್ ಸಿನಿಮಾ 2004ರಲ್ಲಿ ತೆರೆಕಂಡಿತ್ತು.  ಸಿನಿಮಾದಲ್ಲಿ ಲೋಕಲ್ ಹೈದ ‘ಕೆಂಚ’ನಾಗಿ ದರ್ಶನ್ ಅಬ್ಬರಿಸಿದ್ದರು. ಅಲ್ಲಿಯವರೆಗೆ ಏರಿಳಿತ ಕಾಣುತ್ತಿದ್ದ ದರ್ಶನ್ ಕೆರಿಯರ್‌ಗೆ ಈ ಸಿನಿಮಾ ದೊಡ್ಡ ಮೈಲಿಗಲ್ಲಾಯಿತು ಮತ್ತು ಅವರ ಸ್ಟಾರ್‌ಡಮ್ ಅನ್ನು ದುಪ್ಪಟ್ಟು ಮಾಡಿತು.

ಈ ಸಿನಿಮಾದಲ್ಲಿ ದರ್ಶನ್‌ಗೆ ಜೋಡಿಯಾಗಿ ನಟಿ ರಕ್ಷಿತಾ ಕಾಣಿಸಿಕೊಂಡಿದ್ದರು. ಸಾಧು ಕೋಕಿಲರ ಕಾಮಿಡಿ ಟ್ರ್ಯಾಕ್ ಹಾಗೂ ರಾಮ್ ನಾರಾಯಣ್ ಸಂಗೀತದ ಹಾಡುಗಳು ಇಂದಿಗೂ ಸಖತ್ ಫೇಮಸ್. ಅಂದಿನ ಕಾಲಕ್ಕೆ ಥಿಯೇಟರ್‌ಗಳಲ್ಲಿ ಸತತ 35 ವಾರಗಳ ಕಾಲ ಪ್ರದರ್ಶನ ಕಂಡಿದ್ದ ಈ ಸಿನಿಮಾ ಸುಮಾರು 18 ರಿಂದ 22 ಕೋಟಿ ರೂ. ಗಳಿಸಿ ಇತಿಹಾಸ ನಿರ್ಮಿಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !