ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿಪಕ್ಷಗಳು ಇಂದು ಅವಿಶ್ವಾಸ ನಿರ್ಣಯ ಮಂಡಿಸಿದೆ.
ಮಾತನಾಡಲು ಅವಕಾಶ ನೀಡುತ್ತಿಲ್ಲ, ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷದ 118 ಸಂಸದರು ಈ ನಿರ್ಣಯಕ್ಕೆ ಸಹಿ ಹಾಕಿದ್ದಾರೆ.
ಸಂಸತ್ ಅಧಿವೇಶನದ ಎರಡನೇ ದಿನವಾದ ಇಂದು ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಅವರು ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ನಿರ್ಣಯ ಅಂಗೀಕರಿಸಿ ಚರ್ಚೆಗೆ ಅನುಮತಿ ಕೋರಿದರು. ಸ್ಪೀಕರ್ ಪೀಠದಲ್ಲಿ ಕುಳಿತಿದ್ದ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಅವರು ಇದಕ್ಕೆ ಅನುಮತಿ ನೀಡಿದರು.
ಇದೇ ವೇಳೆ, AIMIM ಸಂಸದ ಅಸಾದುದ್ದೀನ್ ಓವೈಸಿ ಅವರು ಲೋಕಸಭೆ ಉಪಸಭಾಪತಿಯ ನೇಮಕ ಕುರಿತು ಚರ್ಚೆಯನ್ನು ಹುಟ್ಟುಹಾಕಿದರು.
ಕೇಂದ್ರ ಸರ್ಕಾರವು ಕಳೆದ ಹಲವಾರು ವರ್ಷಗಳಿಂದ ಉಪಸಭಾಪತಿಯನ್ನು ನೇಮಿಸಿಲ್ಲ. ಇದು ಸಾಂವಿಧಾನಿಕ ನಿರ್ವಾತವನ್ನು ಸೃಷ್ಟಿಸಿದೆ ಎಂದು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಹೇಳಿದರು.
ವಿಪಕ್ಷಗಳ ಆಕ್ಷೇಪಣೆಗಳಿಗೆ ತಿರುಗೇಟು ನೀಡಿದ ಬಿಜೆಪಿ ಸಂಸದರಾದ ರವಿಶಂಕರ್ ಪ್ರಸಾದ್ ಮತ್ತು ನಿಶಿಕಾಂತ್ ದುಬೆ, ಈ ಆಕ್ಷೇಪವೇ ಆಧಾರರಹಿತ ಎಂದರು.
ಲೋಕಸಭಾ ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರುವ ನಿರ್ಣಯದ ಪರವಾಗಿ ಕಾಂಗ್ರೆಸ್ ಸಂಸದರಾದ ಗೌರವ್ ಗೊಗೊಯ್, ಮನೀಶ್ ತಿವಾರಿ, ದೀಪೇಂದರ್ ಸಿಂಗ್ ಹೂಡಾ ಮತ್ತು ಜೋತಿಮಣಿ ಅವರು ಲೋಕಸಭೆಯಲ್ಲಿ ತಮ್ಮ ವಾದ ಮಂಡಿಸಲಿದ್ದಾರೆ.



