September 27, 2026
Sunday, September 27, 2026
spot_img

ಗಂಡನಿಗಿಂತ ಹೆಂಡತಿ ಸಂಬಳ ಜಾಸ್ತಿ ಇದ್ರೆ ಜೀವನಾಂಶ ಇಲ್ಲ: ಹೈಕೋರ್ಟ್ ಮಹತ್ವದ ತೀರ್ಪು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಚ್ಛೇದನ ಪ್ರಕರಣಗಳ ಜೀವನಾಂಶ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತಿಗಿಂತ ಪತ್ನಿಯ ಆದಾಯವೇ ಹೆಚ್ಚಾಗಿದ್ದಾಗ, ಆಕೆ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?

2024ರಲ್ಲಿ ಮದುವೆಯಾಗಿದ್ದ ದಂಪತಿ ಕೆಲವೇ ತಿಂಗಳಲ್ಲಿ ಬೇರ್ಪಟ್ಟಿದ್ದರು. ಪತ್ನಿಯ ಮಾಸಿಕ ಸಂಬಳ ₹1 ಲಕ್ಷ ಹಾಗೂ ಪತಿಯ ಸಂಬಳ ₹60,646 ಆಗಿತ್ತು. ಆದರೂ ಕೆಳಹಂತದ ನ್ಯಾಯಾಲಯವು ಪತ್ನಿಗೆ ಪ್ರತಿ ತಿಂಗಳು ₹20,000 ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್ ನೀಡಿದ ಪ್ರಮುಖ ಆದೇಶಗಳು

  • ಸ್ವಾವಲಂಬನೆ ಮುಖ್ಯ: ಪತ್ನಿಯು ಆರ್ಥಿಕವಾಗಿ ಸಬಲಳಾಗಿದ್ದು, ಮಕ್ಕಳು ಅಥವಾ ಇನ್ಯಾವುದೇ ಕೌಟುಂಬಿಕ ಜವಾಬ್ದಾರಿಗಳು ಇಲ್ಲದಿದ್ದಾಗ ಜೀವನಾಂಶದ ಅಗತ್ಯವಿರುವುದಿಲ್ಲ.
  • ಸಂಪ್ರದಾಯದ ಹೆಸರಲ್ಲಿ ಆದೇಶ ಬೇಡ: “ಮಹಿಳೆಯರನ್ನು ಪುರುಷರೇ ಸಾಕಬೇಕು” ಎಂಬ ಕೇವಲ ಸಾಂಪ್ರದಾಯಿಕ ಕಾರಣ ನೀಡಿ ನ್ಯಾಯಾಲಯಗಳು ಜೀವನಾಂಶ ಮಂಜೂರು ಮಾಡಬಾರದು.
  • ಅರ್ಹತೆಯ ಮಾನದಂಡ: ಪತಿಯ ಜೀವನಮಟ್ಟಕ್ಕೆ ತಕ್ಕಂತೆ ಬದುಕಲು ಪತ್ನಿಯ ಬಳಿ ಯಾವುದೇ ಆದಾಯದ ಮೂಲ ಇಲ್ಲದೇ ಇದ್ದಾಗ ಮಾತ್ರ ಜೀವನಾಂಶವನ್ನು ನೀಡಬೇಕು.

ಕೇವಲ ಪತ್ನಿಯೆಂಬ ಕಾರಣಕ್ಕೆ ಸಬಲ ಮಹಿಳೆಗೆ ಜೀವನಾಂಶ ನೀಡಬೇಕಾಗಿಲ್ಲ ಎಂದು ತಿಳಿಸಿದ ಹೈಕೋರ್ಟ್, ಕೆಳಹಂತದ ಕೋರ್ಟ್ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.

Must Read