October 19, 2026
Monday, October 19, 2026
spot_img

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ: ಅರಣ್ಯ ಸಚಿವರಿಗೆ ಬಿಜೆಪಿ ಮಹಿಳಾ ಮೋರ್ಚಾ ಒತ್ತಾಯ

ಹೊಸದಿಗಂತ ವರದಿ ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಅಮಾಯಕ ಜೀವಗಳು ಬಲಿಯಾಗುತ್ತಿರುವುದರಿಂದ ಅರಣ್ಯ ಸಚಿವರು ತುರ್ತು ಸಭೆ ನಡೆಸಿ ಶಾಶ್ವತ ಪರಿಹಾರ ಸೂಚಿಸಬೇಕು. ತಪ್ಪಿದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಎಚ್ಚರಿಕೆ ನೀಡಿದೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರು, ಕಳೆದ 10 ದಿನಗಳಲ್ಲಿ ಕಾಡಾನೆ ದಾಳಿಗೆ ಎರಡು ಅಮಾಯಕ ಹೆಣ್ಣು ಜೀವಗಳು ಬಲಿಯಾಗಿದ್ದು, ಇದು ಅತ್ಯಂತ ವಿಷಾದಕರ. ಜಿಲ್ಲೆಯಲ್ಲಿ ಮಾನವ ಜೀವಕ್ಕೆ ಬೆಲೆಯೇ ಇಲ್ಲದಾಗಿದೆ. ವನ್ಯಜೀವಿಗಳ ನಿರಂತರ ದಾಳಿ ಆತಂಕ ಸೃಷ್ಟಿಸಿದೆ. ಮಾನವರು ಮಾತ್ರವಲ್ಲದೆ ಜಾನುವಾರುಗಳು ಕೂಡಾ ಬಲಿಯಾಗುತ್ತಿವೆ, ಬೆಳೆ ನಷ್ಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆಯನ್ನು ಅರಣ್ಯ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಕೇವಲ ಯೋಜನೆಯನ್ನು ಘೋಷಿಸಿದರೆ ಸಾಲದು. ಇವುಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಮೂಲಕ ವನ್ಯಜೀವಿಗಳ ದಾಳಿಯಿಂದ ಜಿಲ್ಲೆಯ ಜನರನ್ನು ಪಾರು ಮಾಡಬೇಕು ಎಂದು ಅನಿತಾ ಒತ್ತಾಯಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದರೂ, ಸರಕಾರ ಇಲ್ಲಿಯವರೆಗೆ ಶಾಶ್ವತ ಪರಿಹಾರೋಪಾಯಗಳನ್ನು ಕಂಡುಕೊಂಡಿಲ್ಲ. ಮೃತರ ಕುಟುಂಬಗಳಿಗೆ ಕೇವಲ ಪರಿಹಾರದ ಚೆಕ್ ನೀಡಿ ಕಣ್ಣೊರೆಸುವ ಪ್ರಯತ್ನ ಮಾಡಲಾಗುತ್ತಿದೆಯೇ ಹೊರತು ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯುವಲ್ಲಿ ಆಡಳಿತಗಾರರು ವಿಫಲರಾಗಿದ್ದಾರೆ ಎಂದು ಅನಿತಾ ಪೂವಯ್ಯ ಆರೋಪಿಸಿದ್ದಾರೆ.

ಅರಣ್ಯ ಸಚಿವರು ಶೀಘ್ರ ಕೊಡಗು ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ, ಕೃಷಿಕರ ಹಾಗೂ ಗ್ರಾಮಸ್ಥರ ಸಭೆ ನಡೆಸಿ ಪರಿಹಾರ ಸೂಚಿಸದಿದ್ದರೆ ಅರಣ್ಯ ಭವನದ ಎದುರು ಮಹಿಳಾ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ

Must Read