March 11, 2026
Wednesday, March 11, 2026
spot_img

ಎಂಜಿನ್‌ನಲ್ಲಿ ಕಡಿಮೆ ಇಂಧನ ಪತ್ತೆ: ದಿಲ್ಲಿಗೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಹಾರಾಟವಾದ ಕೆಲವೇ ನಿಮಿಷಗಳಲ್ಲಿ ತುರ್ತು ಭೂಸ್ಪರ್ಶ ಕಂಡಿದೆ.

ಟೇಕ್ ಆಫ್ ಆದ AI-830 ವಿಮಾನದ ಎಂಜಿನ್‌ನಲ್ಲಿ ಕಡಿಮೆ ಇಂಧನ, ಶೂನ್ಯ ಒತ್ತಡ ಇರುವುದನ್ನು ಪೈಲಟ್​​ಗಳು ಪತ್ತೆ ಮಾಡಿದ್ದಾರೆ. ತಕ್ಷಣವೇ ವಾಯು ಸಂಚಾರ ನಿಯಂತ್ರಣ (ಎಟಿಸಿ) ಕೊಠಡಿಗೆ PAN- PAN ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಸ್ಪಂದಿಸಿದ ಎಟಿಸಿ ತಿರುವನಂತಪುರಂಗೆ ವಾಪಸ್​ ಬರಲು ಸೂಚಿಸಿದೆ. ನಂತರ ವಿಮಾನವನ್ನು ಸುರಕ್ಷಿತವಾಗಿ ತುರ್ತಾಗಿ ಇಳಿಸಲಾಯಿತು. ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ವಿಮಾನದಿಂದ ಸ್ಥಳಾಂತರಿಸಲಾಯಿತು. ತಾಂತ್ರಿಕ ಪರಿಶೀಲನೆಗಾಗಿ ವಿಮಾನವನ್ನು ಭೂಮಿಗೆ ಇಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹೇಶ್ ಗುಪ್ತನ್ ಹೇಳಿದ್ದಾರೆ.

ಏನಿದು PAN- PAN ಅಲರ್ಟ್​?:
ಯಾವುದೇ ವಿಮಾನ ಹಾರಾಟದ ವೇಳೆ ಸಮಸ್ಯೆ ಕಂಡು ಬಂದಾಗ ಅದರ ಪೈಲಟ್​ಗಳು ಏರ್ ಟ್ರಾಫಿಕ್​ ಕಂಟ್ರೋಲ್​ (ಎಟಿಸಿ)ಗೆ ತಕ್ಷಣವೇ ಮಾಹಿತಿ ನೀಡುತ್ತಾರೆ. ಸಮಸ್ಯೆಯ ಆಧಾರದ ಮೇಲೆ ಪೈಲಟ್​ಗಳು ಮೇ ಡೇ ಹಾಗೂ ಪಾನ್​ ಪಾನ್​ ಎಂಬ ಎಚ್ಚರಿಕೆ ನೀಡುತ್ತಾರೆ.

PAN- PAN ಎಂದರೆ, ವಿಮಾನದಲ್ಲಿ ದೋಷ ಕಂಡುಬಂದಾಗ ಪ್ರಯಾಣ ಮುಂದುವರಿಸುವುದು ಅಪಾಯ ಎಂದರಿತು ತುರ್ತು ಭೂಸ್ಪರ್ಶಕ್ಕೆ ಅವಕಾಶ ನೀಡಲು ಕೋರುವುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !