ಹೊಸದಿಗಂತ ದಾಂಡೇಲಿ:
ಪ್ರಕೃತಿ ಸೌಂದರ್ಯದ ನಡುವೆ ವನ್ಯಜೀವಿಗಳ ದರ್ಶನಕ್ಕೆ ಹೆಸರಾಗಿರುವ ದಾಂಡೇಲಿಯಲ್ಲಿ ಈಗ ಕಾಡಾನೆಯೊಂದರ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಬುಧವಾರ ಸಂಜೆ ತಾಲೂಕಿನ ಕುಳಗಿ – ಭಾಗವತಿ ರಸ್ತೆಯ ಮಧ್ಯಭಾಗದಲ್ಲಿ ಆನೆಯೊಂದು ಪ್ರತ್ಯಕ್ಷವಾಗಿ ಪ್ರಯಾಣಿಕರಲ್ಲಿ ಆತಂಕ ಮತ್ತು ಕುತೂಹಲ ಮೂಡಿಸಿದೆ.
ಭಾಗವತಿಯಿಂದ ಕುಳಗಿ ಕಡೆಗೆ ಬರುತ್ತಿದ್ದ ಪ್ರಯಾಣಿಕರೊಬ್ಬರು ರಸ್ತೆಯ ಮೇಲೆ ರಾಜಗಾಂಭೀರ್ಯದಿಂದ ಸಾಗುತ್ತಿದ್ದ ಆನೆಯನ್ನು ಕಂಡು, ಅದನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೇಗದಲ್ಲಿ ಹರಿದಾಡುತ್ತಿದೆ.
ಈ ಮಾರ್ಗವು ದಟ್ಟ ಅರಣ್ಯ ಪ್ರದೇಶದಿಂದ ಕೂಡಿರುವುದರಿಂದ ಆನೆ ಹಾಗೂ ಇತರೆ ವನ್ಯಜೀವಿಗಳು ಆಗಾಗ್ಗೆ ರಸ್ತೆಗೆ ಬರುವುದು ಸಹಜವಾಗಿದೆ. ಹೀಗಾಗಿ, ಈ ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರು ಮತ್ತು ವಾಹನ ಸವಾರರು ಹೆಚ್ಚಿನ ಜಾಗರೂಕತೆ ವಹಿಸಬೇಕು ಹಾಗೂ ವನ್ಯಜೀವಿಗಳ ಸಂಚಾರಕ್ಕೆ ಅಡ್ಡಿಪಡಿಸಬಾರದು ಎಂದು ಅರಣ್ಯ ಇಲಾಖೆ ಮತ್ತು ಸ್ಥಳೀಯರು ಮನವಿ ಮಾಡಿದ್ದಾರೆ.



