ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಗೆಲುವಿನ ನಂತರ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ನೀಡಿದ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆಟಗಾರರು ವೈಯಕ್ತಿಕ ದಾಖಲೆಗಳಿಗಾಗಿ ಆಡದೆ, ತಂಡದ ಗೆಲುವಿಗೆ ಆದ್ಯತೆ ನೀಡಬೇಕು ಎಂದು ಅವರು ಸ್ಪಷ್ಟ ಸಂದೇಶ ನೀಡಿದ್ದಾರೆ.
ಭಾರತೀಯ ಕ್ರಿಕೆಟ್‌ನಲ್ಲಿ ವೈಯಕ್ತಿಕ ಮೈಲಿಗಲ್ಲುಗಳನ್ನು ಬೆನ್ನಟ್ಟುವ ಮನೋಭಾವ ಕಡಿಮೆಯಾಗಬೇಕು. ಶತಕ ಅಥವಾ ಅರ್ಧಶತಕಗಳಿಗಾಗಿ ನಿಧಾನವಾಗಿ ಆಡುವುದಕ್ಕಿಂತ ತಂಡದ ಒಟ್ಟು ಮೊತ್ತವನ್ನು ಹೆಚ್ಚಿಸುವುದು ಮುಖ್ಯ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ತಂಡದ ಮುಖ್ಯ ಗುರಿ ಟ್ರೋಫಿ ಗೆಲ್ಲುವುದೇ ಆಗಿರಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ:
ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್ ಪ್ರದರ್ಶನವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಗಂಭೀರ್, ಕೊನೆಯ ಮೂರು ಪಂದ್ಯಗಳಲ್ಲಿ ಅವರು 97*, 89 ಮತ್ತು 89 ರನ್ ಗಳಿಸಿದ್ದರೂ ವೈಯಕ್ತಿಕ ಶತಕಕ್ಕಾಗಿ ಆಟದ ವೇಗವನ್ನು ಕಡಿಮೆ ಮಾಡಲಿಲ್ಲ ಎಂದರು. ತಂಡದ ಹಿತಕ್ಕಾಗಿ ಆಡುವ ಮನಸ್ಥಿತಿ ಪ್ರತಿಯೊಬ್ಬ ಆಟಗಾರರಲ್ಲಿ ಇರಬೇಕು ಎಂದು ಹೇಳಿದರು.
ಸ್ವಾರ್ಥಕ್ಕಾಗಿ ಆಡುವ ಮನೋಭಾವ ಬಿಟ್ಟು ತಂಡದ ಯಶಸ್ಸಿಗಾಗಿ ಶ್ರಮಿಸಬೇಕು. ತಮ್ಮ ಉದ್ದೇಶ ಸೂಪರ್ ಸ್ಟಾರ್‌ಗಳನ್ನು ನಿರ್ಮಿಸುವುದಲ್ಲ, ಬಲಿಷ್ಠ ತಂಡವನ್ನು ಕಟ್ಟುವುದಾಗಿದೆ ಎಂದು ಗಂಭೀರ್ ಸ್ಪಷ್ಟಪಡಿಸಿದ್ದಾರೆ. ಮುಂಬರುವ 2027ರ ಏಕದಿನ ವಿಶ್ವಕಪ್ ಗುರಿಯಾಗಿಸಿಕೊಂಡು ತಂಡವನ್ನು ಮತ್ತಷ್ಟು ಬಲಪಡಿಸುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.



