ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಉದ್ವಿಗ್ನತೆಯ ನಡುವೆ ಭಾರತದ ರಾಜತಾಂತ್ರಿಕ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡದಿಂದಾಗಿ ಮುಚ್ಚಲ್ಪಟ್ಟಿದ್ದ ವಿಶ್ವದ ಅತ್ಯಂತ ಆಯಕಟ್ಟಿನ ‘ಹಾರ್ಮುಜ್ ಜಲಸಂಧಿ’ಯಲ್ಲಿ ಸಂಚರಿಸಲು ಭಾರತೀಯ ಹಡಗುಗಳಿಗೆ ಇರಾನ್ ವಿಶೇಷ ಅನುಮತಿ ನೀಡಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ನಡುವೆ ನಡೆದ ಸುದೀರ್ಘ ಚರ್ಚೆಯ ನಂತರ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.
ಅಮೆರಿಕ ಮತ್ತು ಇಸ್ರೇಲ್ ಮೇಲೆ ಯುದ್ಧ ಸಾರಿರುವ ಇರಾನ್, ತನ್ನ ಶತ್ರು ರಾಷ್ಟ್ರಗಳ ಯಾವುದೇ ಹಡಗು ಕಂಡರೆ ದಾಳಿ ಮಾಡುವ ಎಚ್ಚರಿಕೆ ನೀಡಿತ್ತು. ಆದರೆ ಭಾರತದೊಂದಿಗಿನ ಉತ್ತಮ ಬಾಂಧವ್ಯವನ್ನು ಗೌರವಿಸಿರುವ ಇರಾನ್, ಭಾರತೀಯ ತೈಲ ಟ್ಯಾಂಕರ್ ಮತ್ತು ಕಂಟೈನರ್ ಹಡಗುಗಳಿಗೆ ರಕ್ಷಣೆ ನೀಡಲು ಒಪ್ಪಿಕೊಂಡಿದೆ.
ಈ ಮಾತುಕತೆಯ ಬೆನ್ನಲ್ಲೇ, ಭಾರತೀಯ ತೈಲ ಟ್ಯಾಂಕರ್‌ಗಳಾದ ‘ಪುಷ್ಪಕ್’ ಮತ್ತು ‘ಪರಿಮಲ್’ ಯಾವುದೇ ಅಡೆತಡೆಯಿಲ್ಲದೆ ಹಾರ್ಮುಜ್ ಜಲಸಂಧಿಯನ್ನು ದಾಟಿವೆ ಎಂದು ವರದಿಯಾಗಿದೆ. ಯುದ್ಧದ ಭೀತಿಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ ಮೂಡಿದ್ದ ಈ ಸಮಯದಲ್ಲಿ, ಭಾರತಕ್ಕೆ ಸಿಕ್ಕಿರುವ ಈ ರಿಯಾಯಿತಿ ದೇಶದ ಆರ್ಥಿಕ ಹಿತಾಸಕ್ತಿಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.
ಕಳೆದ ಒಂದು ತಿಂಗಳಲ್ಲಿ ಉಭಯ ದೇಶಗಳ ನಾಯಕರು ನಡೆಸಿದ ಮೂರನೇ ಮಾತುಕತೆ ಇದಾಗಿದ್ದು, ಭಾರತದ ತಟಸ್ಥ ಮತ್ತು ಸಮತೋಲಿತ ವಿದೇಶಾಂಗ ನೀತಿಗೆ ಸಂದ ಜಯವೆಂದು ವಿಶ್ಲೇಷಿಸಲಾಗುತ್ತಿದೆ.



