ಪ್ರತಿದಿನ ಮನೆಯಲ್ಲೇ ಬೇಳೆಸಾರು ಮಾಡಿದ್ರೆ ಬೋರು ಅಂತಾರೆ. ಆದರೆ ಅದೇ ಬೇಳೆಯನ್ನು ಸ್ವಲ್ಪ ವಿಭಿನ್ನ ರೀತಿಯಲ್ಲಿ ಮಾಡಿದರೆ ಅದರ ರುಚಿಯೇ ಬದಲಾಗುತ್ತೆ. ರಾಜಸ್ಥಾನದ ಪ್ರಸಿದ್ಧ ಪಂಚಮೇಲ್ ದಾಲ್ ಅಂತಹದೇ ಒಂದು ವಿಶೇಷ ಖಾದ್ಯ. ಐದು ಬಗೆಯ ಬೇಳೆಗಳನ್ನು ಸೇರಿಸಿ ಮಾಡುವ ಈ ದಾಲ್ ತುಂಬಾ ಪೌಷ್ಟಿಕವೂ ಆಗಿದ್ದು ರೊಟ್ಟಿ, ಚಪಾತಿ ಅಥವಾ ಅನ್ನದ ಜೊತೆ ಅದ್ಭುತವಾಗಿ ಹೊಂದುತ್ತದೆ.
ಬೇಕಾಗುವ ಸಾಮಗ್ರಿಗಳು
ತೊಗರಿ ಬೇಳೆ – 2 ಚಮಚ
ಹೆಸರು ಬೇಳೆ – 2 ಚಮಚ
ಕಡಲೆ ಬೇಳೆ – 2 ಚಮಚ
ಮಸೂರ ಬೇಳೆ – 2 ಚಮಚ
ಉದ್ದಿನ ಬೇಳೆ – 1 ಚಮಚ
ಈರುಳ್ಳಿ – 1 (ಸಣ್ಣದು)
ಟೊಮ್ಯಾಟೊ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಅರಿಶಿನ – 1/4 ಚಮಚ
ಮೆಣಸಿನ ಪುಡಿ – 1/2 ಚಮಚ
ಗರಂ ಮಸಾಲಾ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ ಅಥವಾ ಎಣ್ಣೆ – 2 ಚಮಚ
ಜೀರಿಗೆ – 1/2 ಚಮಚ
ಒಣ ಮೆಣಸು – 1
ಕರಿಬೇವು, ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ
ಮೊದಲು ಎಲ್ಲಾ ಬೇಳೆಗಳನ್ನು ತೊಳೆದು ಸುಮಾರು 15–20 ನಿಮಿಷ ನೀರಲ್ಲಿ ನೆನೆಸಿಡಿ. ನಂತರ ಪ್ರೆಶರ್ ಕುಕ್ಕರ್‌ನಲ್ಲಿ ಬೇಳೆಗಳಿಗೆ ಅರಿಶಿನ ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ.
ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ ಮತ್ತು ಒಣ ಮೆಣಸು ಹಾಕಿ ಒಗ್ಗರಣೆ ಮಾಡಿ. ನಂತರ ಈರುಳ್ಳಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಟೊಮ್ಯಾಟೊ ಸೇರಿಸಿ ಚೆನ್ನಾಗಿ ಮೃದುವಾಗುವವರೆಗೆ ಬೇಯಿಸಿ.
ನಂತರ ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಬೇಯಿಸಿದ ಬೇಳೆ ಸೇರಿಸಿ ಸ್ವಲ್ಪ ನೀರು ಹಾಕಿ 5 ನಿಮಿಷ ಕುದಿಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿದರೆ ರಾಜಸ್ಥಾನಿ ಪಂಚಮೇಲ್ ದಾಲ್ ಸವಿಯಲು ಸಿದ್ಧ.



