ಮನೆಯೊಳಗಿನ ಜಗಳಗಳು ಕೆಲವೊಮ್ಮೆ ತಪ್ಪಿಸಲಾಗದ ಸಂಗತಿಗಳು. ಇಬ್ಬರು ದೊಡ್ಡವರು ಬೇರೆ ಬೇರೆ ಅಭಿಪ್ರಾಯ ಹೊಂದಿರುವಾಗ ಮಾತು ತೀವ್ರವಾಗುವುದು ಸಹಜ. ಆದರೆ ಆ ಜಗಳ ಮಾಡೋವಾಗ ನಿಮ್ಮ ಮಕ್ಕಳು ಇದ್ದಾರಾ ಅಂತಾನೂ ನಾವು ಗಮನಿಸೋದಿಲ್ಲ. ದೊಡ್ಡವರಿಗೆ ಅದು ಕೇವಲ ಒಂದು ಕ್ಷಣದ ಕೋಪವಾಗಿರಬಹುದು, ಆದರೆ ಮಕ್ಕಳಿಗೆ ಅದು ಅವರ ಪ್ರಪಂಚವೇ ಕುಸಿದಂತ ಅನುಭವ ನೀಡಬಹುದು.
ಮಕ್ಕಳು ಪೋಷಕರನ್ನು ನೋಡಿಕೊಂಡೇ ಬದುಕನ್ನು ಅರ್ಥಮಾಡಿಕೊಳ್ಳುತ್ತಾರೆ. ಅಮ್ಮ-ಅಪ್ಪ ಜೋರಾಗಿ ಬೊಬ್ಬೆ ಹಾಕಿಕೊಂಡು ಕಿತ್ತಾಡುವುದನ್ನು ನೋಡಿದಾಗ, ಅವರ ಮನಸ್ಸಿನಲ್ಲಿ ಒಂದು ಅಜ್ಞಾತ ಭಯ ಮೂಡುತ್ತದೆ. ಕೆಲವರು ಅದನ್ನು ಹೊರಗೆ ಹೇಳದೇ ಒಳಗೇ ಇಟ್ಟುಕೊಳ್ಳುತ್ತಾರೆ. ಅದೇ ನಿಧಾನವಾಗಿ ಅವರ ಸ್ವಭಾವದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ:
ಮಕ್ಕಳಿಗೆ ಪೋಷಕರು ಕೇವಲ ದೊಡ್ಡವರು ಅಲ್ಲ, ಅವರು ಭದ್ರತೆ ಮತ್ತು ಪ್ರೀತಿಯ ಸಂಕೇತ. ಆದ್ದರಿಂದ ಜಗಳ ಬಂದರೂ ಅದನ್ನು ಮಕ್ಕಳ ಮುಂದೆ ತೋರಿಸುವುದನ್ನು ತಪ್ಪಿಸುವುದು ಉತ್ತಮ. ಶಾಂತವಾಗಿ ಮಾತನಾಡಿ ಸಮಸ್ಯೆ ಪರಿಹರಿಸುವುದನ್ನು ಮಕ್ಕಳು ನೋಡಿದರೆ, ಅವರು ಕೂಡ ಜೀವನದಲ್ಲಿ ಅದೇ ರೀತಿಯ ನಡೆ ಕಲಿಯುತ್ತಾರೆ.
ಒಂದು ಕ್ಷಣದ ಕೋಪದಿಂದ ಮನೆ ತುಂಬಾ ಗದ್ದಲವಾಗಬಹುದು. ಆದರೆ ಒಂದು ಕ್ಷಣದ ಸಹನೆಯಿಂದ ಮಕ್ಕಳ ಮನಸ್ಸು ಸುರಕ್ಷಿತವಾಗಿರಬಹುದು. ಅದೇ ನಿಜವಾದ ಪೋಷಕರ ಜವಾಬ್ದಾರಿ.



