April 30, 2026
Thursday, April 30, 2026
spot_img

ಸ್ಟುಡಿಯೋ ಓಪನ್ ಮಾಡಿದ ನೆಟ್‌ಫ್ಲಿಕ್ಸ್: ಅದೂ ಕೂಡ ಎಲ್ಲಿ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಒಟಿಟಿ ವೇದಿಕೆಯಾದ ನೆಟ್‌ಫ್ಲಿಕ್ಸ್ ಭಾರತದಲ್ಲಿ ತನ್ನ ಹೂಡಿಕೆಯನ್ನು ವಿಸ್ತರಿಸುವತ್ತ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ತೆಲಂಗಾಣದ ಹೈದರಾಬಾದ್‌ನಲ್ಲಿ ಕಂಪನಿ ತನ್ನ ಪ್ರತಿಷ್ಠಿತ ‘ಐಲೈನ್ ಸ್ಟೂಡಿಯೋಸ್’ ಕೇಂದ್ರವನ್ನು ಆರಂಭಿಸಿದೆ. ಈ ಸ್ಟುಡಿಯೋವನ್ನು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಉದ್ಘಾಟಿಸಿದರು.

ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಸಿಎಂ, ನೆಟ್‌ಫ್ಲಿಕ್ಸ್ ಹೈದರಾಬಾದ್‌ಗೆ ಬಂದಿರುವುದು ನಗರಕ್ಕೆ ಹಾಲಿವುಡ್ ಮಟ್ಟದ ಗುರುತನ್ನು ತಂದುಕೊಡಲಿದೆ ಎಂದು ಹೇಳಿದರು. ವಿಶ್ವದ ಕೆಲವು ಪ್ರಮುಖ ನಗರಗಳಲ್ಲಷ್ಟೇ ಇರುವ ಐಲೈನ್ ಸ್ಟುಡಿಯೋಗಳಲ್ಲಿ ಇದು ಐದನೇ ಕೇಂದ್ರವಾಗಿದೆ.

ಇದನ್ನೂ ಓದಿ:

ಲಾಸ್ ಏಂಜಲೀಸ್, ವ್ಯಾಂಕೋವರ್, ಲಂಡನ್ ಮತ್ತು ಸಿಯೋಲ್ ಬಳಿಕ ಹೈದರಾಬಾದ್‌ನಲ್ಲಿ ಸ್ಥಾಪನೆಯಾದ ಈ ಕೇಂದ್ರವು ಅತ್ಯಾಧುನಿಕ ವಿಎಫ್‌ಎಕ್ಸ್ ಮತ್ತು ವರ್ಚುವಲ್ ಪ್ರೊಡಕ್ಷನ್ ತಂತ್ರಜ್ಞಾನವನ್ನು ಹೊಂದಿದೆ. ಸುಮಾರು 32 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿತವಾದ ಈ ಸ್ಟುಡಿಯೋ ದಕ್ಷಿಣ ಭಾರತದ ಸಿನಿಮಾ ಮತ್ತು ವೆಬ್ ಸರಣಿಗಳ ನಿರ್ಮಾಣಕ್ಕೆ ಹೆಚ್ಚಿನ ಬೆಂಬಲ ನೀಡಲಿದೆ.

ಈ ಯೋಜನೆಯಿಂದ ಸ್ಥಳೀಯ ಕಲಾವಿದರು ಹಾಗೂ ತಾಂತ್ರಿಕ ನಿಪುಣರಿಗೆ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳು ಸಿಗುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ಐಟಿ ಸಚಿವ ಡಿ. ಶ್ರೀಧರ್ ಬಾಬು, ನಟ ರಾಣಾ ದಗ್ಗುಬಾಟಿ ಹಾಗೂ ನೆಟ್‌ಫ್ಲಿಕ್ಸ್ ಅಧಿಕಾರಿಗಳು ಉಪಸ್ಥಿತರಿದ್ದರು. ತೆಲುಗು ಚಿತ್ರರಂಗದೊಂದಿಗೆ ನೆಟ್‌ಫ್ಲಿಕ್ಸ್ ಈಗಾಗಲೇ ನಿಕಟ ಸಂಪರ್ಕ ಹೊಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !