ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್ ಸಪ್ಲೇಯಲ್ಲಿ ವ್ಯತ್ಯಯ ಕಾಣುತ್ತಿದ್ದಂತೆಯೇ ಜನ ಇಂಡಕ್ಷನ್ ಸ್ಟೋವ್ ಹಾಗೂ ಹಳೆಯ ಕಾಲದ ಸೌದೆ ಒಲೆಗೆ ಡಿಮ್ಯಾಂಡ್ ಬಂದಿದೆ.
ಈ ಹಿನ್ನೆಲೆಯಲ್ಲಿ ಮರದ ಕಟ್ಟಿಗೆಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇದೇ ನೆಪದಲ್ಲಿ ಕಾಡಿನ ಮರಗಳನ್ನು ಕಡಿಯುವಂತಿಲ್ಲ ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಗ್ಯಾಸ್ ಸಿಗುತ್ತಿಲ್ಲವೆಂದು ಮರಗಳನ್ನು ಅಕ್ರಮವಾಗಿ ಕಡಿದರೆ ಸಂಬಂಧಿತ ಪ್ರದೇಶದ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ LPG ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ ಮರಗಳನ್ನು ಕಡಿದು ಕಟ್ಟಿಗೆ ಬಳಸುವ ಪ್ರವೃತ್ತಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಕ್ರಮ ಮರ ಕಡಿತ ತಡೆಯಲು ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಅಡುಗೆ ಅನಿಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಸೌದೆಯ ಬಳಕೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಕಾಡಿನ ಮರಗಳಿಗೆ ಕೊಡಲಿ ಏಟು ಬೀಳುವ ಭೀತಿ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಹೈ-ಅಲರ್ಟ್ ಘೋಷಿಸಿದೆ.



