ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಎದುರಾಗಿರುವ ಎಲ್‌ಪಿಜಿ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಕೂಡಲೇ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಹೊರದೇಶಗಳಿಂದ ಅನಿಲ ಆಮದು ಮಾಡಿಕೊಳ್ಳುವ ಮೂಲಕ ಪೂರೈಕೆ ಸುಗಮಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಗಂಭೀರ ಸಮಸ್ಯೆಯ ಕುರಿತು ಈಗಾಗಲೇ ಕೇಂದ್ರ ಪೆಟ್ರೋಲಿಯಂ ಸಚಿವ ಹಾರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಹೋಟೆಲ್ ಉದ್ಯಮವು ಅನಿಲ ಪೂರೈಕೆಯ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಇದರಲ್ಲಿ ವ್ಯತ್ಯಯ ಉಂಟಾದರೆ ಜನಸಾಮಾನ್ಯರ ಜೀವನ ಅಸ್ತವ್ಯಸ್ತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗಿದ್ದು, ಅನಿಲ ಸರಬರಾಜಿನಲ್ಲಿ ಯಾವುದೇ ಅಡ್ಡಿಯಾಗದಂತೆ ನಿರ್ವಹಣೆ ಮಾಡುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಮಾತ್ರ ಈ ಸಮಸ್ಯೆ ಇದೆ ಎಂದು ಟೀಕಿಸುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಸಿಎಂ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. “ಕೇವಲ ಟೀಕೆ ಮಾಡುವ ಬದಲು, ಕೇಂದ್ರದ ಮೇಲೆ ಒತ್ತಡ ತಂದು ರಾಜ್ಯಕ್ಕೆ ಹೆಚ್ಚಿನ ಅನಿಲ ಸರಬರಾಜು ಮಾಡಿಸುವಲ್ಲಿ ಬಿಜೆಪಿ ನಾಯಕರು ಶ್ರಮಿಸಲಿ” ಎಂದು ಅವರು ಸವಾಲು ಹಾಕಿದರು.



