October 16, 2026
Friday, October 16, 2026
spot_img

ಉಳ್ಳಾಲದಲ್ಲಿ ನಾಳೆ ಪ್ರಜಾಸೇವಾ ಆಂದೋಲನ : ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ

ಹೊಸದಿಗಂತ ವರದಿ ಉಳ್ಳಾಲ:

ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಉಳ್ಳಾಲ ತಾಲೂಕಿನಲ್ಲಿ ನಾಳೆ ಪ್ರಜಾಸೇವಾ ಆಂದೋಲನ ಆಯೋಜಿಸಲಾಗಿದೆ.

ಕೋಣಾಜೆಯ ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ಉಳ್ಳಾಲ‌ ತಾಲೂಕು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ತಿಳಿಸಿದ್ದಾರೆ.

ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಕುರಿತು ಈಗಾಗಲೇ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಪ್ರಚಾರ ನಡೆಸಲಾಗಿದೆ. ಪಟ್ಟಣ ಪಂಚಾಯತ್, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಸಂಬಂಧಪಟ್ಟವರ ಸಭೆ ನಡೆಸಿ ಮಾಹಿತಿ ನೀಡಲಾಗಿದೆ. ಮಾಧ್ಯಮಗಳ ಮೂಲಕವೂ ಸಾರ್ವಜನಿಕರಿಗೆ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲಾಗಿದೆಯೆಂದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿ:

ಪ್ರಜಾಸೇವಾ ಆಂದೋಲನದಲ್ಲಿ ತಾಲೂಕು ಮಟ್ಟದ ಸಮಸ್ಯೆಗಳ ಜತೆಗೆ ಜಿಲ್ಲಾ ಮಟ್ಟಕ್ಕೆ ಸಂಬಂಧಿಸಿದ ಅಹವಾಲುಗಳನ್ನೂ ಸ್ವೀಕರಿಸಲಾಗುತ್ತದೆ. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸುವುದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಲು ಅವಕಾಶವಿದೆಯೆಂದರು.

ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ಅರ್ಜಿ ದಾಖಲು:

ಸಾರ್ವಜನಿಕರಿಂದ ಸ್ವೀಕರಿಸುವ ಅಹವಾಲುಗಳನ್ನು ಐಪಿಜಿಆರ್‌ಎಸ್ (IPGRS) ಸಾರ್ವಜನಿಕ ಕುಂದುಕೊರತೆ ಪರಿಹಾರ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಇದರಿಂದ ಅರ್ಜಿಯ ಪ್ರಸ್ತುತ ಸ್ಥಿತಿ, ಯಾವ ಹಂತದಲ್ಲಿದೆ ಹಾಗೂ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆಯಲು ಸಾಧ್ಯವಾಗಲಿದೆ. ಅರ್ಜಿಗಳನ್ನು ಸ್ವೀಕರಿಸುವುದಕ್ಕಷ್ಟೇ ಸೀಮಿತವಾಗದೆ, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಆಂದೋಲನದ ಪ್ರಗತಿಯನ್ನು ಸಚಿವರ ಮಟ್ಟದಲ್ಲಿ ಪರಿಶೀಲಿಸಲಾಗುತ್ತದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆಯುವ ಪರಿಶೀಲನಾ ಸಭೆಗಳಲ್ಲಿಯೂ ಅಹವಾಲುಗಳ ವಿಲೇವಾರಿ ಕುರಿತು ಚರ್ಚಿಸಲಾಗುತ್ತದೆ. ಈ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಆರೋಗ್ಯ ತಪಾಸಣೆ,ರಕ್ತದಾನ ಶಿಬಿರ:

ನಾಳೆ ಬೆಳಗ್ಗೆ 10 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಇದರ ಅಂಗವಾಗಿ 40 ವರ್ಷ ಮೇಲ್ಪಟ್ಟವರಿಗೆ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಜೊತೆಗೆ ರಕ್ತದಾನ ಶಿಬಿರವೂ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸುವ ಮೂಲಕ ಪ್ರಜಾಸೇವಾ ಆಂದೋಲನದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಶಾಂತ್ ಪಾಟೀಲ್ ಮನವಿ ಮಾಡಿದರು.

ಉಳ್ಳಾಲ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಗುರುದತ್ ಎಂ ಎನ್,ಉಳ್ಳಾಲ ನಗರಸಭೆ ಪೌರಾಯುಕ್ತ ಸಂತೋಷ್ ಎಸ್ ಡಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Must Read