March 15, 2026
Sunday, March 15, 2026
spot_img

46 ಪ್ರಾಂತ, 1487 ಮಂದಿ ಅಪೇಕ್ಷಿತರು: ಆರೆಸ್ಸೆಸ್ ವಾರ್ಷಿಕ ಮಹಾಸಭೆ, ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಂಪನ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಹರಿಯಾಣದ ಸಮಾಲ್ಖಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೆಸ್ಸೆಸ್ ವಾರ್ಷಿಕ ಮಹಾಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾ ಭಾನುವಾರ ಸಂಪನ್ನಗೊಂಡಿದೆ.


ಮೂರು ದಿನಗಳ ಕಾಲ ನಡೆದ ಈ ಸಭೆಯಲ್ಲಿ ದೇಶದ 46 ಪ್ರಾಂತಗಳಿಂದ ಒಟ್ಟು 1487 ಮಂದಿ ಆಗಮಿಸಿದ್ದರು. ಸಭೆಯಲ್ಲಿ ಸಂಘದ ಕಾರ್ಯವಿಸ್ತಾರ ಮತ್ತು ಈ ವರ್ಷ ವಿಶೇಷವಾಗಿ ಸಂಘದ ಶತಾಬ್ದಿಯ ನಿಮಿತ್ತ ನಡೆದ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.


ಸಭೆಯ ಬಗ್ಗೆ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಭೆಯಲ್ಲಿ ಸಂಘಟನಾತ್ಮವಾಗಿ ಎರಡು ವಿಷಯ, ಸಮಾಜದ ಕುರಿತಾದ ಮೂರು ವಿಚಾರಗಳಲ್ಲಿ ಚರ್ಚಿಸಲಾಗಿದೆ. ಈಗ ಪ್ರಸ್ತುತ 88,949 ಶಾಖೆಗಳಿವೆ. ಕೇವಲ ಕಾರ್ಯದ ವಿಸ್ತಾರವಾದರೇ ಸಾಲದು, ಬದಲಾಗಿ ಕಾರ್ಯಕರ್ತರ ಗುಣಾತ್ಮಕ ವಿಕಾಸವೂ ಆಗಬೇಕೆಂಬುದು ನಮ್ಮ ಗುರಿ. ಈ ಕಾರ್ಯವನ್ನು ನಾವು ಮುಂದುವರೆಸುತ್ತೇವೆ ಎಂದರು.


ಭಾರತದ ಇತಿಹಾಸ, ಸಂಸ್ಕೃತಿ, ಜನಜೀವನ, ಜ್ಞಾನ ಪರಂಪರೆಯ ಕುರಿತು ಸರಿಯಾದ ವಿಮರ್ಶೆ ನಡೆಯಬೇಕು. ದೇಶದ ಯೋಚನೆಯಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ, ಪಠ್ಯಪುಸ್ತಕಗಳಲ್ಲಿ, ಅಂಕಣಗಳು ಮತ್ತು ಮಾಧ್ಯಮಗಳಲ್ಲಿ ಸರಿಯಾದ ವಿಚಾರ ಬರಬೇಕು. ಆಂಗ್ಲರ ಪ್ರಭಾವದಿಂದ ನಮ್ಮ ಮಾನಸಿಕತೆ, ವಸಾಹತೀಕರಣಕ್ಕೆ ಒಳಗಾಯಿತು. ಈಗ ಮಾನಸಿಕತೆಯ ನಿರ್ವಸಾಹತೀಕರಣ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.


ಶತಾಬ್ದಿ ವರ್ಷದಲ್ಲಿ ನಾಗರಿಕ ಗೋಷ್ಠಿ, ಹಿಂದು ಸಮ್ಮೇಳನದಂತಹ ಕಾರ್ಯಕ್ರಮದಲ್ಲಿ ಗ್ರಾಮಸ್ತರದಲ್ಲಿ, ನಗರಸ್ತರದಲ್ಲಿ ಎಲ್ಲಾ ಮಂದಿ ಜೊತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಅನೇಕ ಮಂದಿ ಸಾಧು ಸಂತರು ಬೆಂಬಲ ಸೂಚಿಸಿ ಮಾರ್ಗದರ್ಶನ ನೀಡಿದ್ದಾರೆ. ಸಂಘದ ಪದಾಧಿಕಾರಿಗಳು, ಮಾತೃಶಕ್ತಿಯೂ ಈ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ತೇಗಬಹದ್ದೂರ್ ಅವರ 350ನೇ ವರ್ಷದ ಪುಣ್ಯಸ್ಮರಣೆ, ವಂದೇ ಮಾತರಂ ನ 150ನೇ ವರ್ಷದ ಕಾರ್ಯಕ್ರಮಗಳು ದೇಶಾದ್ಯಂತ ನಡೆದವು. ಎಲ್ಲವೂ ಸಂಘದ ಹೆಸರಿಂದ ಆಗಲಿಲ್ಲ, ಸ್ವಯಂಸೇವಕರ ಪ್ರಯತ್ನದಿಂದ ನಡೆದಿವೆ. ಕೆಲವು ಸ್ಥಾನೀಯ ಸಂಸ್ಥೆಗಳ ಸಹಾಯದಿಂದ ಆಯೋಜಿಸಲಾಗಿದೆ. 2134 ಗುರು ತೆಗಬಹದ್ದೂರ್ ಅವರ ಕಾರ್ಯಕ್ರಮಗಳು 18 ಪ್ರಾಂತಗಳಲ್ಲಿ ಮಾಡಲಾಗಿದೆ. ಏಳು ಲಕ್ಷ ಜನ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಸಾಧು ಸಂತರನ್ನು ಈ ಕಾರ್ಯಕ್ರಮಕ್ಕಾಗಿ ಸಂಪರ್ಕಿಸಲಾಗಿತ್ತು.

ಜೊತೆಗೆ ಸಂತ ಶಿರೋಮಣಿ ರವಿದಾಸರ 650ನೇ ವರ್ಷದ ಜಯಂತಿ ಕಾರ್ಯಕ್ರಮದ ಕುರಿತಾದ ಹೇಳಿಕೆ ನೀಡಲಾಗಿದೆ. ಗುರುವಿನ ಸ್ಮರಣೆ ಮಾಡುವುದು ಮತ್ತು ಸಂತರ ಶ್ರದ್ದೆಯಿಂದ ನೋಡುವುದು, ರಾಷ್ಟ್ರವನ್ನು ಒಂದಾಗಿ ಇಡುವಂತೆ ಮಾಡುತ್ತದೆ. ಈ ಮಹಾನ್ ಪುರುಷರ ಕಾರ್ಯ, ಧರ್ಮದ ದೃಷ್ಟಿಯಿಂದ ಸಮಾಜದ ದೃಷ್ಟಿಯಿಂದ ಅವರ ಜೀವನದ ಮೌಲ್ಯಗಳು ನಮಗೆ ಪ್ರೇರಣೆಯನ್ನು ನೀಡುತ್ತದೆ ಎಂದರು.


ಶತಾಬ್ದಿ ವರ್ಷ ಇನ್ನೂ 2026ರ ವಿಜಯದಶಮಿಯವರೆಗೆ ಇರುವುದರಿಂದ ಯುವಕರ ಕಾರ್ಯಕ್ರಮ ಇನ್ನೂ ಕೆಲವು ಪ್ರಾಂತಗಳಲ್ಲಿ ನಡೆಯಬೇಕಿದೆ. ಆದ್ದರಿಂದ ಯುವಕರ ಕೇಂದ್ರಿತವಾದ ಕಾರ್ಯಕ್ರಮಗಳು, ಪ್ರಾಂತಗಳ ಸಂವಾದ, ಯುವ ಪ್ರತಿಭೆಗಳ ಗುರುತಿಸುವಿಕೆ, ವಿವಿಧ ಚಟುವಟಿಕೆಗಳು, ಪಂಚಪರಿವರ್ತನೆಯ ವಿಷಯಗಳನ್ನು ಪ್ರಯೋಗಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಸಹಕಾರಿಯಾಗುವಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಘಟನಾತ್ಮಕ ದೃಷ್ಟಿಯಿಂದಲೂ ಯುವಕರ ಏಕತ್ರೀಕರಣದಂತಹ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.


ಅಂಡಮಾನ್‌ನ ಪೋರ್ಟ್‌ಬ್ಲೇರ್‌ನಲ್ಲಿ ಶತಾಬ್ದಿಯ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಅವರು ಭಾಗವಹಿಸಿದ್ದರು. 9 ದ್ವೀಪಗಳಿಂದ ಆ ಕಾರ್ಯಕ್ರಮಕ್ಕೆ ಗಣ್ಯರು ಆಗಮಿಸಿದ್ದರು. 13000 ಮಂದಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅರುಣಾಚಲ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ನಡೆದ 21 ಕಾರ್ಯಕ್ರಮಗಳಲ್ಲಿ 37,000ಕ್ಕೂ ಹೆಚ್ಚುಮಂದಿ ಭಾಗವಹಿಸಿದ್ದರು ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್, ಸಹ ಪ್ರಚಾರ ಪ್ರಮುಖರಾದ ನರೇಂದ್ರ ಠಾಕೂರ್ ಮತ್ತು ಪ್ರದೀಪ್ ಜೋಶಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !