September 30, 2026
Wednesday, September 30, 2026
spot_img

‘ವಂದೇ ಮಾತರಂ’ ಸಂದೇಶದೊಂದಿಗೆ ಬಾಹ್ಯಾಕಾಶದತ್ತ ವಿಕ್ರಮ್-1: ಇತಿಹಾಸ ಬರೆಯಲು ಸಜ್ಜಾದ ಸ್ಕೈರೂಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ಸ್ಕೈರೂಟ್ ಏರೋಸ್ಪೇಸ್ ಸಜ್ಜಾಗಿದೆ. ಜುಲೈ 18ರಂದು ಶ್ರೀಹರಿಕೋಟಾದಿಂದ ಉಡಾವಣೆಯಾಗಲಿರುವ ವಿಕ್ರಮ್-1 ರಾಕೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಬರಹದ ‘ವಂದೇ ಮಾತರಂ’ ಸಂದೇಶವೂ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಲಿದೆ. ಈ ವಿಶೇಷ ಉಡಾವಣೆ ಭಾರತದ ವಾಣಿಜ್ಯ ಬಾಹ್ಯಾಕಾಶ ಸಾಮರ್ಥ್ಯಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

‘ವಂದೇ ಮಾತರಂ’ ಸಂದೇಶಕ್ಕೂ ಸಿಕ್ಕಿದೆ ವಿಶೇಷ ಸ್ಥಾನ

ಪ್ರಧಾನಿ ನರೇಂದ್ರ ಮೋದಿ ಅವರ ಕೈಬರಹದ ಪೋಸ್ಟ್‌ಕಾರ್ಡ್‌ ಜೊತೆಗೆ ಸ್ಕೈರೂಟ್ ಸಂಸ್ಥೆಯ ಸಿಬ್ಬಂದಿ, ವಿಜ್ಞಾನಿಗಳು, ಹೂಡಿಕೆದಾರರು, ನೀತಿ ರೂಪಿಸುವವರು ಹಾಗೂ ಹಲವು ಗಣ್ಯರ ಕೈಬರಹದ ಸಂದೇಶಗಳನ್ನೂ ರಾಕೆಟ್ ಹೊತ್ತೊಯ್ಯಲಿದೆ. ಭಾರತದ ಬಾಹ್ಯಾಕಾಶ ಪಯಣಕ್ಕೆ ಕೈಜೋಡಿಸಿದವರನ್ನು ಗೌರವಿಸುವ ಉದ್ದೇಶದಿಂದ ಈ ವಿಶೇಷ ಪ್ರಯತ್ನ ಕೈಗೊಳ್ಳಲಾಗಿದೆ.

ಇದನ್ನೂ ಓದಿ:

ತಂತ್ರಜ್ಞಾನ ಪರೀಕ್ಷೆಯ ಜೊತೆಗೆ ಐತಿಹಾಸಿಕ ಮಿಷನ್

‘ಮಿಷನ್ ಆಗಮನ’ ಹೆಸರಿನ ಈ ಉಡಾವಣೆಯಲ್ಲಿ ಹಲವು ತಂತ್ರಜ್ಞಾನ ಪ್ರದರ್ಶನ ಪೇಲೋಡ್‌ಗಳನ್ನೂ ಕೊಂಡೊಯ್ಯಲಾಗುತ್ತಿದೆ. ಅಲ್ಲದೆ, ಇಸ್ರೋದ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಭಾರತೀಯ ಗಗನಯಾತ್ರಿಗಳ ಕೈಬರಹದ ಸಂದೇಶಗಳು ಹಾಗೂ ವಿಶೇಷ ಕಲಾಕೃತಿಯೂ ಈ ಮಿಷನ್‌ನ ಭಾಗವಾಗಿವೆ.

ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು

ಸುಮಾರು ಏಳು ಮಹಡಿಗಳ ಎತ್ತರದ ವಿಕ್ರಮ್-1 ರಾಕೆಟ್ 350 ಕೆ.ಜಿ.ವರೆಗೆ ಪೇಲೋಡ್ ಅನ್ನು ಲೋ ಅರ್ಥ್ ಆರ್ಬಿಟ್‌ಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. 2022ರಲ್ಲಿ ಯಶಸ್ವಿಯಾದ ವಿಕ್ರಮ್-ಎಸ್ ಬಳಿಕ ಇದು ಸ್ಕೈರೂಟ್‌ನ ಮೊದಲ ಕಕ್ಷಾ ಉಡಾವಣೆಯಾಗಿದ್ದು, ಯಶಸ್ವಿಯಾದರೆ ಭಾರತದಲ್ಲಿ ಖಾಸಗಿ ಸಂಸ್ಥೆ ಅಭಿವೃದ್ಧಿಪಡಿಸಿದ ರಾಕೆಟ್ ಕಕ್ಷೆ ತಲುಪಿದ ಮೊದಲ ಸಾಧನೆ ಎನ್ನಿಸಿಕೊಳ್ಳಲಿದೆ.

Must Read