June 30, 2026
Tuesday, June 30, 2026
spot_img

ರಾಜ್ಯ ರಾಜಕೀಯದ ‘ಡಿನ್ನರ್ ಡಿಪ್ಲೊಮಸಿ’: ‘ಕೈ’ ಪಾಳಯದಲ್ಲಿ ಕುರ್ಚಿ ಸಮರಕ್ಕೆ ಹೊಸ ಟ್ವಿಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ‘ಡಿನ್ನರ್ ಪಾಲಿಟಿಕ್ಸ್’ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭರ್ಜರಿ ಔತಣಕೂಟದ ಬೆನ್ನಲ್ಲೇ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರಿಗಾಗಿ ವಿಶೇಷ ಡಿನ್ನರ್ ಪಾರ್ಟಿ ಆಯೋಜಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರೈಸಿದ ಸಂಭ್ರಮದಲ್ಲಿ ಡಿ.ಕೆ. ಶಿವಕುಮಾರ್ ಇತ್ತೀಚೆಗಷ್ಟೇ ಸಚಿವರಿಗೆ ಔತಣಕೂಟ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಎಂಬಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾತ್ರಿ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಆಪ್ತ ಸಚಿವರ ಸಭೆ ಕರೆದಿದ್ದಾರೆ. ಮೇಲ್ನೋಟಕ್ಕೆ ಇದು ಕೇವಲ ರಾತ್ರಿಯ ಭೋಜನದಂತೆ ಕಂಡರೂ, ಇದರ ಹಿಂದೆ ಭವಿಷ್ಯದ ರಾಜಕೀಯ ತಂತ್ರಗಾರಿಕೆ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾಂಗ್ರೆಸ್ ಪಾಳಯದಲ್ಲಿ ‘ಮುಂದಿನ ಸಿಎಂ’ ಅಥವಾ ‘ಕುರ್ಚಿ’ ವಿಚಾರವಾಗಿ ಶೀತಲ ಸಮರ ನಡೆಯುತ್ತಲೇ ಇದೆ. ಡಿ.ಕೆ.ಶಿವಕುಮಾರ್ ತಂಡ ಒಂದು ಕಡೆ ಸಭೆಗಳನ್ನು ನಡೆಸಿ ಸಿದ್ದು ಟೀಂಗೆ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದರೆ, ಇತ್ತ ಸಿದ್ದರಾಮಯ್ಯ ತಂಡ ಕೂಡ ಪ್ರತಿರೋಧ ಒಡ್ಡಲು ಸಜ್ಜಾಗಿದೆ.

ಇಂದಿನ ಡಿನ್ನರ್ ಪಾರ್ಟಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರೊಂದಿಗೆ ಯಾವ ವಿಷಯದ ಬಗ್ಗೆ ಚರ್ಚಿಸಲಿದ್ದಾರೆ? ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಈ ಮೂಲಕ ಏನಾದರೂ ತಿರುವು ನೀಡಲಿದ್ದಾರೆಯೇ? ಎಂಬ ಪ್ರಶ್ನೆಗಳು ಈಗ ‘ಕೈ’ ಪಾಳಯದಲ್ಲಿ ಸಂಚಲನ ಮೂಡಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !