March 18, 2026
Wednesday, March 18, 2026
spot_img

ಕಾಂಗ್ರೆಸ್​​ ಜೊತೆಯ ಬಲವಂತದ ಮದುವೆಗೆ ವಿಚ್ಚೇದನ ಅನಿವಾರ್ಯವಾಗಿತ್ತು: ಖರ್ಗೆಗೆ ದೇವೇಗೌಡರ ಕೌಂಟರ್​!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭೆಯಲ್ಲಿ ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಹಾರಿಸಿದ ಹಾಸ್ಯ ಚಟಾಕಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಿರುಗೇಟು ನೀಡಿದ್ದು, ಕಾಂಗ್ರೆಸ್ ಜೊತೆ ಬಲವಂತದ ಮದುವೆಯಾಗಿತ್ತು. ಬಳಿಕ ವಿಚ್ಚೇದನ ನೀಡಬೇಕಾಯಿತು ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ನಿವೃತ್ತಿ ಹೊಂದುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಹಿತ ಹಲವು ಸಂಸದರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಖರ್ಗೆ, ಕಳೆದ 54 ವರ್ಷಗಳಿಂದ ನಾನೂ, ದೇವೇಗೌಡರು ಜೊತೆ ಜೊತೆಯಾಗಿ ಕರ್ತವ್ಯ ನಿರ್ವಹಿಸಿದ್ದೇವೆ. ದಿಢೀರ್ ಏನಾಯಿತು ಗೊತ್ತಿಲ್ಲ, ನನ್ನನ್ನು ಪ್ರೀತಿಸಿದರು, ಮೋದಿ ಅವರನ್ನು ಮದುವೆಯಾದರು ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.

ಇದೀಗ ಖರ್ಗೆ ಮಾತಿಗೆ ಪತ್ರ ಮುಖೇನ ಕೌಂಟರ್ ನೀಡಿದ ದೇವೇಗೌಡರು, ನನ್ನ ದೀರ್ಘಕಾಲದ ಸ್ನೇಹಿತ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಂಸತ್ತಿನಲ್ಲಿ ನಾನು ಕಾಂಗ್ರೆಸ್ಅನ್ನು ಪ್ರೀತಿ ಮಾಡಿ ಮೋದಿ ಅವರನ್ನು ಮದುವೆಯಾದೆ ಎಂದು ಹೇಳಿದ್ದಾರೆ. ಆದರೆ ಅವರು ಯಾಕೆ ಆ ರೀತಿ ಹೇಳಿದರೂ ಎಂದು ನನಗೆ ತಿಳಿದಿಲ್ಲ.

ರಾಜ್ಯಸಭೆಯಲ್ಲಿ ಖರ್ಗೆ ಅವರು ಇಂದು ಮಾತನಾಡುವ ವೇಳೆ ನಾನು ಸದನದಲ್ಲಿ ಇರಲಿಲ್ಲ. ಯುಗಾದಿ ಹಬ್ಬದ ಪ್ರಯುಕ್ತ ಬೆಂಗಳೂರಿಗೆ ಬರಬೇಕಾಯಿತು. ಆದರೆ ನನ್ನ ಸ್ನೇಹಿತನಿಗೆ ಮದುವೆಯ ಭಾಷೆಯಲ್ಲಿಯೇ ಉತ್ತರಿಸಲು ಬಯಸುತ್ತೇನೆ. ನಾವು ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆವು. ಆದರೆ ಅಲ್ಲಿ ಹಿಂಸೆ ಇದ್ದ ಕಾರಣ ವಿಚ್ಛೇದನ ನೀಡಬೇಕಾಯಿತು ಎಂದು ಹೇಳಿದ್ದಾರೆ.

ಅಂದು 2018 ರಲ್ಲಿ ಕಾಂಗ್ರೆಸ್ ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಿ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಮುಂದೆ ಬಂದಾಗ, ನಾನೇ ಬೇಡ ಅಂದಿದ್ದೆ. ಆ ಸಮಯ ಅಲ್ಲಿ ಸಿದ್ದರಾಮಯ್ಯ ಕೂಡ ಇದ್ದರು. ಆದರೆ ಆಜಾದ್ ಅವರು ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಒತ್ತಾಯ ಮಾಡಿದ್ದರು. ಈ ರೀತಿಯ ಹಾಡು, ಡ್ಯಾನ್ಸ್ ಮತ್ತು ಮದುವೆ ಬಳಿಕ 2019 ರಲ್ಲಿ ಏನಾಯಿತು? ಎಲ್ಲರು ಸೇರಿ ನಮ್ಮನ್ನು ನಡು ದಾರಿಯಲ್ಲೇ ಬಿಟ್ಟು ಹೋದರು. ನಿಮ್ಮ ಶಾಸಕರು ಬಿಜೆಪಿ ಕಡೆಗೆ ವಾಲಿದರು. ಅಲ್ಲಿಗೆ ಅವರನ್ನು ಕಳುಹಿಸಿದ್ದು ಯಾರು? ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಖಡಕ್ ಆಗಿ ತಿರುಗೇಟು ನೀಡಿದರು.

ಆ ದಿನ ನೀವು ನನ್ನ ಮಾತು ಕೇಳಿ ಪಕ್ಷಾಂತರಕ್ಕೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಿದ್ದರೆ, ಇಂದು ನನ್ನ ಸ್ನೇಹಿತ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಉತ್ತಮ ಸ್ಥಾನದಲ್ಲಿರುತ್ತಿದ್ದರು. ನಾವು ಯಾವತ್ತೂ ಕಾಂಗ್ರೆಸ್ ಬಿಟ್ಟು ಹೋಗಿರಲಿಲ್ಲ. ಅವರೇ ದೂರ ಹೋದರು. ಇದರಿಂದ ನನಗೆ ಕಾಂಗ್ರೆಸ್‌ಗೆ ವಿಚ್ಛೇದನ ನೀಡಿ ಹೊರಬರಬೇಕಾಯಿತು ಎಂದು ದೇವೇಗೌಡರು ಖಡಕ್ ಆಗಿ ಉತ್ತರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !