ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಯುದ್ಧದ ಭೀತಿ ಮತ್ತು ಉದ್ವಿಗ್ನ ಪರಿಸ್ಥಿತಿಯು ಕೇವಲ ಆ ದೇಶಗಳಿಗೆ ಸೀಮಿತವಾಗದೆ, ಜಾಗತಿಕ ವಿಮಾನಯಾನ ಮತ್ತು ಪ್ರವಾಸೋದ್ಯಮದ ಮೇಲೆ ಭೀಕರ ಪರಿಣಾಮ ಬೀರಿದೆ. ವಾಯುಪ್ರದೇಶದ ನಿರ್ಬಂಧ ಹಾಗೂ ಅನಿಶ್ಚಿತತೆಯಿಂದಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ನಡುವಿನ ಸಂಪರ್ಕ ಕೊಂಡಿಗಳು ಕಡಿಯುತ್ತಿವೆ.
ಯುದ್ಧದ ಹಿನ್ನೆಲೆಯಲ್ಲಿ ಹಲವು ದೇಶಗಳು ತಮ್ಮ ವಾಯುಪ್ರದೇಶವನ್ನು ಬಂದ್ ಮಾಡಿವೆ. ಇದರಿಂದಾಗಿ ವಿಮಾನಗಳು ಸುದೀರ್ಘ ಮಾರ್ಗಗಳನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಇಂಧನ ವೆಚ್ಚ ಹೆಚ್ಚಾಗಿ ವಿಮಾನ ಟಿಕೆಟ್ ದರಗಳು ಗಗನಕ್ಕೇರಿವೆ. ಅನೇಕ ವಿಮಾನಗಳು ಅಚಾನಕ್ ರದ್ದಾಗುತ್ತಿರುವುದು ಪ್ರಯಾಣಿಕರನ್ನು ಹೈರಾಣಾಗಿಸಿದೆ.
ಭಾರತದಿಂದ ಪಶ್ಚಿಮ ದೇಶಗಳಿಗೆ ಹೋಗುವ ಬಹುತೇಕ ವಿಮಾನಗಳು ದುಬೈ, ದೋಹಾ ಮತ್ತು ಅಬುಧಾಬಿ ಮೂಲಕವೇ ಸಾಗುತ್ತವೆ. ಈಗ ಈ ಹಬ್‌ಗಳಲ್ಲಿನ ವ್ಯತ್ಯಯದಿಂದಾಗಿ ಭಾರತದ ವಿಮಾನಯಾನ ವೇಳಾಪಟ್ಟಿ ಸಂಪೂರ್ಣ ಏರುಪೇರಾಗಿದೆ.
ದೇಶಾದ್ಯಂತ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು 40% ರಷ್ಟು ಇಳಿಕೆ ಕಂಡುಬಂದಿದೆ. ಪ್ರತಿದಿನ ಅರಬ್ ರಾಷ್ಟ್ರಗಳಿಂದ ಬೆಂಗಳೂರಿಗೆ ಬರುತ್ತಿದ್ದ 25-30 ವಿಮಾನಗಳ ಸಂಖ್ಯೆ ಈಗ ಗಣನೀಯವಾಗಿ ಕ್ಷೀಣಿಸಿದೆ.
ವರ್ಷಕ್ಕೆ ಸುಮಾರು 8 ರಿಂದ 9 ಮಿಲಿಯನ್ ಭಾರತೀಯರು ಗಲ್ಫ್ ರಾಷ್ಟ್ರಗಳಿಗೆ ಪ್ರವಾಸಕ್ಕಾಗಿ ತೆರಳುತ್ತಾರೆ. ಅಲ್ಲದೆ, ಸುಮಾರು 13 ಮಿಲಿಯನ್ ಭಾರತೀಯರು ಅಲ್ಲಿ ಉದ್ಯೋಗದಲ್ಲಿದ್ದಾರೆ. ವಿಮಾನಯಾನದ ಈ ಅಸ್ತವ್ಯಸ್ತ ಸ್ಥಿತಿಯು ಇವರೆಲ್ಲರ ಜೀವನ ಮತ್ತು ಪ್ರವಾಸೋದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರಿದೆ.
ಭಾರತವು ಜಾಗತಿಕವಾಗಿ ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗಿದೆ. ಪ್ರತಿ ವರ್ಷ ಬರುವ 6 ರಿಂದ 7 ಲಕ್ಷ ವಿದೇಶಿ ರೋಗಿಗಳಲ್ಲಿ ಹೆಚ್ಚಿನವರು ಗಲ್ಫ್ ರಾಷ್ಟ್ರದವರೇ ಆಗಿರುತ್ತಾರೆ. ವಿಮಾನಗಳ ಕೊರತೆ ಮತ್ತು ದುಬಾರಿ ವೆಚ್ಚದಿಂದಾಗಿ ಚಿಕಿತ್ಸೆಗಾಗಿ ಭಾರತಕ್ಕೆ ಬರುವವರ ಸಂಖ್ಯೆಯೂ ಇಳಿಮುಖವಾಗುವ ಭೀತಿ ಎದುರಾಗಿದೆ.



