September 19, 2026
Saturday, September 19, 2026
spot_img

ನಗೋಯಾದಲ್ಲಿ ಏಷ್ಯನ್ ಗೇಮ್ಸ್‌ಗೆ ಅದ್ಧೂರಿ ಚಾಲನೆ: ತ್ರಿವರ್ಣ ಧ್ವಜ ಹಿಡಿದು ಮುನ್ನಡೆದ ಮನು–ಪವನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾದ ಕ್ರೀಡಾಪಟುಗಳ ಬಹುದೊಡ್ಡ ಸಮರಕ್ಕೆ ಜಪಾನ್‌ನ ನಗೋಯಾ ಸಜ್ಜಾಗಿದೆ. 20ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ಗೆ ಶನಿವಾರ ಮಿಜುಹೊ ಪಾರ್ಕ್ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದ ಮೂಲಕ ಅಧಿಕೃತ ಚಾಲನೆ ದೊರೆತಿದೆ.

ಜಪಾನ್ ಚಕ್ರವರ್ತಿ ನರುಹಿತೊ ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ವೇಳೆ ಏಷ್ಯಾ ಒಲಿಂಪಿಕ್ ಮಂಡಳಿ ಅಧ್ಯಕ್ಷ ಶೇಖ್ ಜೋವಾನ್ ಬಿನ್ ಹಮದ್ ಅಲ್ ಥಾನಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಸುಮಾರು ಎರಡು ಗಂಟೆಗಳ ಕಾರ್ಯಕ್ರಮದಲ್ಲಿ ಕ್ರೀಡಾ ಸಂಭ್ರಮ, ಸಂಗೀತ ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಗಮನ ಸೆಳೆದವು. 45 ರಾಷ್ಟ್ರಗಳು ಹಾಗೂ ಒಸಿಎ ತಂಡದ ಕ್ರೀಡಾಪಟುಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು. ಅಫ್ಘಾನಿಸ್ತಾನ ತಂಡದೊಂದಿಗೆ ಕ್ರೀಡಾಪಟುಗಳ ಪಥಸಂಚಲನ ಆರಂಭವಾಯಿತು.

ಕೊನೆಯ ಕ್ಷಣದಲ್ಲಿ ನಡೆಯಿತು ಬದಲಾವಣೆ

ಭಾರತದ 501 ಸದಸ್ಯರ ತಂಡದ ಧ್ವಜಧಾರಿಗಳಾಗಿ ಒಲಿಂಪಿಕ್ಸ್ ಪದಕ ವಿಜೇತೆ ಶೂಟರ್ ಮನು ಭಾಕರ್ ಹಾಗೂ ಕಬಡ್ಡಿ ತಾರೆ ಪವನ್ ಸೆಹ್ರಾವತ್ ತ್ರಿವರ್ಣ ಧ್ವಜದೊಂದಿಗೆ ಮುನ್ನಡೆದರು. ಮೂಲತಃ ಶಾಟ್‌ಪುಟ್ ಪಟು ತಜಿಂದರ್‌ಪಾಲ್ ಸಿಂಗ್ ತೂರ್ ಧ್ವಜಧಾರಿಯಾಗಬೇಕಿತ್ತು. ಆದರೆ ಅಧಿಕೃತ ಸಮಾರಂಭದ ಕಿಟ್ ಸಮಯಕ್ಕೆ ಲಭ್ಯವಾಗದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಪವನ್ ಸೆಹ್ರಾವತ್ ಅವರನ್ನು ಆಯ್ಕೆ ಮಾಡಲಾಯಿತು.

ಭಾರತ 2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ 28 ಚಿನ್ನ ಸೇರಿದಂತೆ 106 ಪದಕಗಳನ್ನು ಗೆದ್ದು ನಾಲ್ಕನೇ ಸ್ಥಾನ ಪಡೆದಿತ್ತು. ಇದೀಗ ನಗೋಯಾದಲ್ಲಿ ಆ ಪ್ರದರ್ಶನವನ್ನು ಮುಂದುವರಿಸುವ ನಿರೀಕ್ಷೆಯೊಂದಿಗೆ ಭಾರತೀಯ ಕ್ರೀಡಾಪಟುಗಳು ಕಣಕ್ಕಿಳಿದಿದ್ದಾರೆ.

ಉದ್ಘಾಟನೆಗೂ ಮುನ್ನ ಸ್ಪರ್ಧೆಗಳು ಆರಂಭ

ಉದ್ಘಾಟನೆಗೂ ಮುನ್ನವೇ ಕೆಲವು ಸ್ಪರ್ಧೆಗಳು ಆರಂಭವಾಗಿವೆ. ಮಹಿಳಾ ಕ್ರಿಕೆಟ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಜಪಾನ್ ವಿರುದ್ಧ ಎಂಟು ವಿಕೆಟ್‌ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.

ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ಸುಮಾರು 11,000 ಕ್ರೀಡಾಪಟುಗಳು 43 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಒಟ್ಟು 469 ಚಿನ್ನದ ಪದಕಗಳಿಗಾಗಿ ನಡೆಯಲಿರುವ ಈ ಪೈಪೋಟಿಯಲ್ಲಿ ಭಾರತದ ಕ್ರೀಡಾಪಟುಗಳ ಪ್ರದರ್ಶನದತ್ತ ಇದೀಗ ಕ್ರೀಡಾಭಿಮಾನಿಗಳ ಗಮನ ನೆಟ್ಟಿದೆ.

ಪ್ರಧಾನಿ ಮೋದಿಯಿಂದ ಶುಭಹಾರೈಕೆ

ಉದ್ಘಾಟನಾ ಸಮಾರಂಭದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತೀಯ ತಂಡಕ್ಕೆ ಶುಭ ಹಾರೈಸಿದ್ದಾರೆ. ಪ್ರತಿಯೊಬ್ಬ ಕ್ರೀಡಾಪಟುವೂ ಅಪಾರ ಪರಿಶ್ರಮ, ಸಮರ್ಪಣೆ ಮತ್ತು ಉತ್ಸಾಹದೊಂದಿಗೆ ಸಿದ್ಧತೆ ನಡೆಸಿದ್ದಾರೆ. ಭಾರತವು ಅವರ ಬಗ್ಗೆ ಹೆಮ್ಮೆಪಡುತ್ತಿದೆ. ಕ್ರೀಡಾಪಟುಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿ, ಉತ್ತಮವಾಗಿ ಸ್ಪರ್ಧಿಸಿ ಮಿಂಚಲಿ ಎಂದು ಪ್ರಧಾನಿ ಶುಭ ಹಾರೈಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !