ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಗುರು ಜಗ್ಗಿ ವಾಸುದೇವ್ ಮತ್ತು ಇಶಾ ಫೌಂಡೇಶನ್ ವಿರುದ್ಧ ಮಾನಹಾನಿಕರ ಲೇಖನ ಹಾಗೂ ವಿಡಿಯೋಗಳನ್ನು ಪ್ರಕಟಿಸಿದ್ದ ತಮಿಳು ನಿಯತಕಾಲಿಕೆ ‘ನಕ್ಕೀರನ್’ಗೆ ದೆಹಲಿ ಹೈಕೋರ್ಟ್ ಬಿಗಿ ಸೂಚನೆ ನೀಡಿದೆ. ಫೌಂಡೇಶನ್ ವಿರುದ್ಧದ ಎಲ್ಲಾ ಆಕ್ಷೇಪಾರ್ಹ ವಿಷಯಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ನ್ಯಾಯಾಲಯವು ಮಧ್ಯಂತರ ಆದೇಶ ಹೊರಡಿಸಿದೆ.
ತಮ್ಮ ವಿರುದ್ಧ ವ್ಯವಸ್ಥಿತವಾಗಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಆರೋಪಿಸಿ ಇಶಾ ಫೌಂಡೇಶನ್ ಡಿಸೆಂಬರ್ 2025ರಲ್ಲಿ ನ್ಯಾಯಾಲಯದ ಮೊರೆ ಹೋಗಿತ್ತು.
ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ನಕ್ಕೀರನ್ ಪತ್ರಿಕೆಯು ಇಶಾ ಫೌಂಡೇಶನ್ ಪ್ರತಿಷ್ಠೆಗೆ ಕುಂದು ತರುವಂತಹ ಯಾವುದೇ ವಿಷಯಗಳನ್ನು ಪ್ರಕಟಿಸಬಾರದು ಎಂದು ಆದೇಶಿಸಿದೆ.
ನ್ಯಾಯಾಲಯದ ಈ ನಿರ್ಧಾರವನ್ನು ಸ್ವಾಗತಿಸಿರುವ ಇಶಾ ಫೌಂಡೇಶನ್, ಸಮಾಜದ ಕಲ್ಯಾಣಕ್ಕಾಗಿ ಕಳೆದ 30 ವರ್ಷಗಳಿಂದ ಶ್ರಮಿಸುತ್ತಿರುವ ನಮಗೆ ಈ ತೀರ್ಪು ಆನೆಬಲ ತಂದಿದೆ ಎಂದು ಹೇಳಿದೆ.
“ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಯಾವುದೇ ಪುರಾವೆಗಳಿಲ್ಲದೆ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಆದರೆ ಅಂತಿಮವಾಗಿ ಸತ್ಯವೇ ಗೆದ್ದಿದೆ. ಸುಳ್ಳು ಮಾಹಿತಿ ಹರಡಿ ನಮ್ಮ ಸಾಮಾಜಿಕ ಕಾರ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ನಾವು ಕಾನೂನು ಸಮರ ಮುಂದುವರಿಸುತ್ತೇವೆ” ಎಂದು ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.



