ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಯಾರಿದವರಿಗೆ ನೀರು ನೀಡುವುದು ಶ್ರೇಷ್ಠ ಧರ್ಮಕಾರ್ಯವಾಗಿದ್ದು, ನೀರು ಕೇವಲ ದಾಹ ತಣಿಸುವ ದ್ರವವಲ್ಲ. ಅದು ದೇಹದ ಆರೋಗ್ಯ ಕಾಪಾಡುವ ದಿವ್ಯ ಔಷಧ ಹಾಗೂ ಧರ್ಮ ಸಾಧನೆಯ ಪ್ರಮುಖ ಸಾಧನ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಶುಕ್ರವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ಬಾಯಾರಿದವರಿಗೆ ನೀರು ನೀಡುವುದು ಮತ್ತೊಬ್ಬರ ಜಠರಾಗ್ನಿಗೆ ಜಲವನ್ನು ಆಹುತಿಯಾಗಿ ನೀಡುವ ಯಜ್ಞದಂತೆ ಎಂದು ವಿವರಿಸಿದರು. ಬೇಸಿಗೆಯಲ್ಲಿ ದಾರಿಹೋಕರಿಗೆ ನೀರು ನೀಡುವುದು, ಬಾವಿ ಹಾಗೂ ಕೆರೆಗಳನ್ನು ನಿರ್ಮಿಸುವುದು ಶ್ರೇಷ್ಠ ಕಾರ್ಯವೆಂದು ಧರ್ಮ ಶಾಸ್ತ್ರವನ್ನು ಆಧರಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ವಾತಿ ನಕ್ಷತ್ರದ ಮಳೆಯ ನೀರಿನ ಮಹತ್ವವನ್ನು ವಿವರಿಸಿದ ಅವರು, ಈ ನೀರು ಜೀರ್ಣಕ್ರಿಯೆಗೆ ಲಘು, ದೇಹಕ್ಕೆ ಪಥ್ಯಕರವಾಗಿದ್ದು, ದೀರ್ಘಕಾಲ ಸಂಗ್ರಹಿಸಿದರೂ ಕೆಡದ ಗುಣ ಹೊಂದಿದೆ ಎಂದು ಹೇಳಿದರು. ವರ್ಷಗಳ ಕಾಲ ಸಂಗ್ರಹಿಸಿದರೂ ಸೂಕ್ಷ್ಮಜೀವಿಗಳು ಉತ್ಪತ್ತಿಯಾಗುವುದಿಲ್ಲ ಎಂಬುದನ್ನು ಆಧುನಿಕ ವಿಜ್ಞಾನವೂ ಒಪ್ಪಿದೆ ಎಂದು ತಿಳಿಸಿದರು.

ಗಂಗಾ ಸ್ನಾನದಿಂದ ಪಾಪ ಪರಿಹಾರವಾಗುವ ವಿಚಾರದ ಕುರಿತು ಮಾತನಾಡಿದ ಶ್ರೀಗಳು, ಮಾಡಿದ ತಪ್ಪಿನ ಅರಿವು, ಪಶ್ಚಾತ್ತಾಪ ಹಾಗೂ ಮತ್ತೆ ಅದೇ ತಪ್ಪು ಮಾಡದಿರುವ ದೃಢಸಂಕಲ್ಪವೇ ನಿಜವಾದ ಪ್ರಾಯಶ್ಚಿತ್ತ. ಅಂತಹ ಮನೋಭಾವದಿಂದ ಕೈಗೊಳ್ಳುವ ಗಂಗಾ ಸ್ನಾನದಿಂದ ಮಾತ್ರ ಪಾಪ ಪರಿಹಾರದ ಅರ್ಥ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಮಡಿವಾಳ ಸಮಾಜದಿಂದ ಸ್ವರ್ಣಪಾದುಕಾ ಪೂಜೆ
ಶ್ರೀರಾಮಚಂದ್ರಾಪುರ ಮಠಕ್ಕೆ ತಲೆತಲಾಂತರದಿಂದ ನಡೆದುಕೊಳ್ಳುವ ಮಡಿವಾಳ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ಪಾದುಕಾ ಪೂಜೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಮಡಿವಾಳ ಸಮಾಜವು ಸಂಘಟಿತವಾಗುವ ಮೂಲಕ ಹೆಚ್ಚಿನ ಒಳಿತನ್ನು ಪಡೆಯುವಂತಾಗಲಿ. ಸಮಾಜದ ಜೊತೆಗೆ ಗುರುಪೀಠ ಸದಾ ಇರಲಿದ್ದು, ಸಮಾಜದ ಕಷ್ಟ – ನಷ್ಟಗಳು ದೂರವಾಗಲಿ ಎಂದು ಆಶೀರ್ವದಿಸಿದರು. ಮಂಜುನಾಥ ಮಡಿವಾಳ, ಸದಾನಂದ ಮಡಿವಾಳ, ಮಂಜುನಾಥ ಬಿಳಗಿ, ರಮಾನಂದ ಮಡಿವಾಳ ಸೇರಿದಂತೆ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

ಆನಂದ ಭಟ್ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು. ದಿನಪ್ರಧಾನರಾಗಿ ರಾಮಚಂದ್ರರಾವ್ ಗಾಂಜಾಳ ದಂಪತಿ ಉಪಸ್ಥಿತರಿದ್ದರು.




