ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾನ್ಫಿಡೆಂಟ್ ಗ್ರೂಪ್‌ನ ಮಾಲೀಕ ಮತ್ತು ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ತನಿಖಾ ತಂಡವು ಮುಂದಿನ ವಾರ ಅಧಿಕೃತ ವರದಿಯನ್ನು ಸಲ್ಲಿಸಲಿದೆ.
ಪೊಲೀಸರು ಈ ಪ್ರಕರಣವನ್ನು ನಾಲ್ಕು ವಿಭಿನ್ನ ಆಯಾಮಗಳಲ್ಲಿ (ಕುಟುಂಬ, ವ್ಯವಹಾರ, ಐಟಿ ದಾಳಿ ಮತ್ತು ವೈಯಕ್ತಿಕ ಸಂಬಂಧ) ತನಿಖೆ ನಡೆಸಿದ್ದಾರೆ.
ಘಟನಾ ಸ್ಥಳದಿಂದ ಸಂಗ್ರಹಿಸಲಾಗಿದ್ದ ಮಾದರಿಗಳ ವೈಜ್ಞಾನಿಕ ವರದಿ ಈಗ ಲಭ್ಯವಾಗಿದ್ದು, ಅದನ್ನು ಅಂತಿಮ ವರದಿಯಲ್ಲಿ ಸೇರಿಸಲಾಗಿದೆ.
ರಾಯ್ ಅವರ ಕುಟುಂಬ ಸದಸ್ಯರು, ಆಪ್ತರು ಹಾಗೂ ಐಟಿ ಅಧಿಕಾರಿಗಳ ಹೇಳಿಕೆಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ.
ತನಿಖಾ ವರದಿಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಸಿ.ಜೆ. ರಾಯ್ ಅವರು ತೀವ್ರವಾದ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಆದರೆ, ಅಷ್ಟು ದೊಡ್ಡ ಉದ್ಯಮಿಯನ್ನು ಖಿನ್ನತೆಗೆ ದೂಡಿದ ನಿಖರ ಕಾರಣಗಳೇನು ಎಂಬುದು ಇನ್ನೂ ಸಾರ್ವಜನಿಕವಾಗಿ ಬಯಲಾಗಿಲ್ಲ. ಇದು ಸದ್ಯಕ್ಕೆ ದೊಡ್ಡ ಕುತೂಹಲ ಮೂಡಿಸಿದೆ.
ಸಿ.ಜೆ. ರಾಯ್ ಅವರು 2026ರ ಜನವರಿ 30ರಂದು ತಮ್ಮ ಕಾನ್ಫಿಡೆಂಟ್ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆಯು ಉದ್ಯಮ ಲೋಕದಲ್ಲಿ ಭಾರೀ ಸಂಚಲನ ಮೂಡಿಸಿತ್ತು.



