ಹೊಸದಿಗಂತ ಡಿಜಿಟಲ್ ಡೆಸ್ಕ್;
ಸಾಂಸ್ಕೃತಿಕ ನಗರಿ ಮೈಸೂರಿನ ಇತಿಹಾಸ ಪ್ರಸಿದ್ಧ ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಧಾರ್ಮಿಕ ಉತ್ಸವಗಳ ಸಂಭ್ರಮ ಕಳೆಗಟ್ಟಿದೆ. ಜುಲೈ 17 ರಿಂದ ಆರಂಭವಾಗಲಿರುವ ಆಷಾಢ ಮಾಸದ ವಿಶೇಷ ಪೂಜಾ ಕೈಂಕರ್ಯಗಳ ಹಿನ್ನೆಲೆಯಲ್ಲಿ ಬುಧವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಬೆಟ್ಟಕ್ಕೆ ಭೇಟಿ ನೀಡಿ ಅಗತ್ಯ ಪೂರ್ವಸಿದ್ಧತೆಗಳ ಪರಿಶೀಲನೆ ನಡೆಸಿದರು.
ದೇವಿಯ ದರ್ಶನ ಪಡೆದ ಸಚಿವರು:
ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಮೊದಲು ಆದಿಶಕ್ತಿ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ತದನಂತರ ದೇವಸ್ಥಾನದ ಆವರಣ ಮತ್ತು ಬೆಟ್ಟದ ಸುತ್ತಮುತ್ತ ಭಕ್ತಾಧಿಗಳ ಅನುಕೂಲಕ್ಕಾಗಿ ಕೈಗೊಳ್ಳಲಾಗಿರುವ ಸಿದ್ಧತೆಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ ಮಾಹಿತಿ ಪಡೆದುಕೊಂಡರು.
ಖಾಸಗಿ ವಾಹನ ನಿಷೇಧ – ಉಚಿತ ಬಸ್ ಸೌಲಭ್ಯ:
ಸಾಮಾನ್ಯ ಜನರಿಗೆ ಸಂಚಾರದ ತೊಂದರೆ ತಪ್ಪಿಸಲು ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ 4 ವಾರಗಳ ವಾರಾಂತ್ಯದ ಅವಧಿಯಲ್ಲಿ ಭಕ್ತರಿಗಾಗಿ ಲಲಿತಮಹಲ್ ಅರಮನೆ ಮೈದಾನ ಮತ್ತು ನಗರ ಬಸ್ ನಿಲ್ದಾಣದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಈ ಬಸ್‌ಗಳು ಬೆಳಗ್ಗೆ 6:30 ರಿಂದ ಆರಂಭವಾಗಿ ರಾತ್ರಿ 8:30 ಕ್ಕೆ ಕೊನೆಗೊಳ್ಳಲಿವೆ. ಇನ್ನು ಬೆಟ್ಟದ ಪಾದದಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತಾಧಿಗಳಿಗೆ ಬೆಳಗ್ಗೆ 5:00 ಗಂಟೆಯ ನಂತರವಷ್ಟೇ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದ್ದು, ಸಾರ್ವಜನಿಕರು ಅದಕ್ಕೂ ಮುನ್ನ ಬಂದು ಕಾಯದಂತೆ ಸೂಚಿಸಲಾಗಿದೆ. ಮೆಟ್ಟಿಲು ಹತ್ತುವ ಭಕ್ತರಿಗೆ ದಾರಿಯುದ್ದಕ್ಕೂ ಹಾಲು ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ.
300 ರೂ. ಟಿಕೆಟ್ ರದ್ದು; 2,000 ರೂ. ನೇರ ದರುಶನ:
ಈ ಬಾರಿ ಭಕ್ತರ ವಿಶೇಷ ದರ್ಶನಕ್ಕೆ ಇದ್ದ 300 ರೂಪಾಯಿ ಟಿಕೆಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಬದಲಾಗಿ, ಯಾವುದೇ ಸರತಿ ಸಾಲು ಇಲ್ಲದೆ ನೇರ ದೇವರ ದರ್ಶನ ಪಡೆಯಲು ಬಯಸುವವರಿಗಾಗಿ 2,000 ರೂಪಾಯಿ ಮುಖಬೆಲೆಯ ವಿಶೇಷ ಟಿಕೆಟ್ ಪರಿಚಯಿಸಲಾಗಿದೆ. ಈ ದುಬಾರಿ ಟಿಕೆಟ್ ಖರೀದಿಸುವ ಭಕ್ತರಿಗೆ ದರುಶನದ ಜತೆಗೆ ತಾಯಿ ಚಾಮುಂಡೇಶ್ವರಿಯ ಭಾವಚಿತ್ರ ಹಾಗೂ ಲಾಡು ಪ್ರಸಾದ ಒಳಗೊಂಡ ವಿಶೇಷ ಕಿಟ್ ನೀಡಲಾಗುತ್ತದೆ.
ವಿಐಪಿಗಳಿಗೆ ಸಮಯ ನಿಗದಿ, ಶಿಫಾರಸು ಪತ್ರಗಳಿಗೆ ನೋ ಎಂಟ್ರಿ:
ವಿಐಪಿ ಹಾಗೂ ವಿವಿಐಪಿ ಭಕ್ತರ ದರುಶನಕ್ಕೆ ಮುಂಜಾನೆ 5:30 ರಿಂದ ಬೆಳಗ್ಗೆ 9:30 ರವರೆಗೆ ಮಾತ್ರ ಕಟ್ಟುನಿಟ್ಟಿನ ಸಮಯ ನಿಗದಿಪಡಿಸಲಾಗಿದೆ. ಶಿಷ್ಟಾಚಾರದ ನಿಯಮಕ್ಕೆ ಒಳಪಟ್ಟವರಿಗೆ ಮಾತ್ರ ಈ ಅವಧಿಯಲ್ಲಿ ಅವಕಾಶವಿದ್ದು, ರಾಜಕಾರಣಿಗಳು ಅಥವಾ ಅಧಿಕಾರಿಗಳ ಶಿಫಾರಸು ಪತ್ರಗಳನ್ನು ತಂದವರಿಗೆ ಯಾವುದೇ ಪ್ರತ್ಯೇಕ ವಿಶೇಷ ದರ್ಶನದ ವ್ಯವಸ್ಥೆ ಅಷ್ಟೇ ಅಲ್ಲದೆ, ವಿಐಪಿ ವಾಹನಗಳನ್ನು ಮಹಿಷಾಸುರನ ಪ್ರತಿಮೆ ವೃತ್ತದ ಬಳಿಯೇ ಕಡ್ಡಾಯವಾಗಿ ಪಾರ್ಕಿಂಗ್ ಮಾಡಬೇಕು ಎಂದು ತಿಳಿಸಿದ್ದಾರೆ.



