ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿಗಳ ಕಚೇರಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬೆಸ್ಕಾಂ ಎಇ ಎಸ್. ಚೇತನ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರ ಪೀಠ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿಯೇ ಚಾಟಿ ಬೀಸಿದೆ.
“ಮುಖ್ಯಮಂತ್ರಿಗಳಿಗೆ ವರ್ಗಾವಣೆ ಮಾಡುವುದಕ್ಕಿಂತ ಮಾಡಬೇಕಾದ ಉತ್ತಮ ಕೆಲಸಗಳು ಸಾಕಷ್ಟಿವೆ. ವರ್ಗಾವಣೆ ವಿಚಾರಗಳನ್ನು ಆಯಾ ಇಲಾಖೆಗಳಿಗೇ ಬಿಟ್ಟುಬಿಡಬೇಕು” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಸಿಎಂ ಕಚೇರಿ ಇನ್ನು ಮುಂದೆ ವರ್ಗಾವಣೆಗೆ ಸಂಬಂಧಿಸಿದ ಯಾವುದೇ ಮನವಿಗಳನ್ನು ಸ್ವೀಕರಿಸಬಾರದು ಎಂದು ನ್ಯಾಯಾಲಯ ಕಠಿಣ ಸೂಚನೆ ನೀಡಿದೆ. ಈ ತೀರ್ಪಿನ ಪ್ರತಿಯನ್ನು ನೇರವಾಗಿ ಮುಖ್ಯಮಂತ್ರಿಗಳಿಗೇ ಕಳುಹಿಸಿಕೊಡುವಂತೆ ಕೋರ್ಟ್ ಆದೇಶಿಸಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಇಂಧನ ಇಲಾಖೆಯ ವರ್ಗಾವಣೆ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಇಂಧನ ಇಲಾಖೆಯ ಆಡಳಿತದಲ್ಲಿ ಅತಿಯಾಗಿ ಮೂಗು ತೂರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಸಚಿವ ಕೆ.ಜೆ. ಜಾರ್ಜ್ ಅವರು ರಾಜೀನಾಮೆಯ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ.
ಸಿಎಂ ನೀಡುವ ವರ್ಗಾವಣೆ ಪತ್ರಗಳ ಬಗ್ಗೆ ಕೋರ್ಟ್ ಪ್ರಶ್ನಿಸಿದಾಗ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ದಾರೆ. “ಸಿಎಂ ಕಚೇರಿಯಿಂದ ಬರುವ ಟಿಪ್ಪಣಿಗಳು ಕೇವಲ ಶಿಫಾರಸುಗಳಷ್ಟೇ. ಅಂತಿಮವಾಗಿ ಸಂಬಂಧಪಟ್ಟ ಇಲಾಖೆಯೇ ವರ್ಗಾವಣೆ ಆದೇಶ ನೀಡುತ್ತದೆ” ಎಂದು ಅವರು ಕೋರ್ಟ್‌ಗೆ ತಿಳಿಸಿದ್ದಾರೆ.
ಈ ಬೆಳವಣಿಗೆಯಿಂದಾಗಿ ರಾಜ್ಯ ಸರ್ಕಾರಕ್ಕೆ ಮುಜುಗುರ ಉಂಟಾಗಿದ್ದು, ವರ್ಗಾವಣೆ ದಂಧೆಯ ಕುರಿತು ವಿರೋಧ ಪಕ್ಷಗಳ ಟೀಕೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.



