ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ರೈತರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ವೈಜ್ಞಾನಿಕ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದ್ದು, ಇದೀಗ ಎರಡನೇ ಹಂತದಲ್ಲಿ ಹೆಚ್ಚುವರಿಯಾಗಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.
124ಕ್ಕೇರಿದ ಬರಪೀಡಿತ ತಾಲೂಕುಗಳ ಸಂಖ್ಯೆ
ಮೊದಲ ಹಂತದ ಪ್ರತ್ಯಕ್ಷ ಪರಿಶೀಲನೆಯಲ್ಲಿ 102 ತಾಲೂಕುಗಳ ಪೈಕಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಎರಡನೇ ಹಂತದಲ್ಲಿ ಘೋಷಿಸಲಾದ 23 ತಾಲೂಕುಗಳ ಪೈಕಿ 21 ತಾಲೂಕುಗಳು ತೀವ್ರ ಬರಪೀಡಿತವಾಗಿದ್ದು, 2 ತಾಲೂಕುಗಳು ಸಾಧಾರಣ ಬರಪೀಡಿತವಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಅಧಿಕೃತವಾಗಿ ಘೋಷಿತವಾದ ಬರಪೀಡಿತ ತಾಲೂಕುಗಳ ಒಟ್ಟು ಸಂಖ್ಯೆ 124ಕ್ಕೆ ಏರಿಕೆಯಾಗಿದೆ.
ನೂತನ ಬರಪೀಡಿತ ತಾಲೂಕುಗಳು
ತಿಪಟೂರು, ಕಾರಟಗಿ, ಮಾನ್ವಿ, ಸಿಂಧನೂರು, ಸಿರವಾರ, ಅಫಜಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಯಡ್ರಾಮಿ, ಶಹಾಬಾದ್, ಭಾಲ್ಕಿ, ಬಸವನಬಾಗೇವಾಡಿ, ಬಬಲೇಶ್ವರ, ತಿಕೋಟಾ, ರಟ್ಟೀಹಳ್ಳಿ, ಹುಬ್ಬಳ್ಳಿ, ನವಲಗುಂದ, ಹುಬ್ಬಳ್ಳಿ ನಗರ, ಅಣ್ಣಿಗೇರಿ ಹಾಗೂ ಕಡೂರು. ಪೊನ್ನಂಪೇಟೆ ಮತ್ತು ವೀರಾಜಪೇಟೆ.
ಮೂರನೇ ಹಂತದ ಗ್ರೌಂಡ್ ಟ್ರೂಥಿಂಗ್‌ಗೆ ಚಾಲನೆ
ಜೂನ್ 1ರಿಂದ ಸೆಪ್ಟೆಂಬರ್ 16ರವರೆಗಿನ ಮಳೆ ಪ್ರಮಾಣ, ಮಣ್ಣಿನ ತೇವಾಂಶ ಹಾಗೂ ಬೆಳೆ ಸ್ಥಿತಿಯಂತಹ ವೈಜ್ಞಾನಿಕ ಮಾನದಂಡಗಳನ್ನು ಆಧರಿಸಿ, 17 ಜಿಲ್ಲೆಗಳ 53 ತಾಲೂಕುಗಳನ್ನು ಮೂರನೇ ಹಂತದ ಗ್ರೌಂಡ್ ಟ್ರೂಥಿಂಗ್‌ಆಯ್ಕೆ ಮಾಡಲಾಗಿದೆ.
‘Crop Loss GT’ ಆ್ಯಪ್ ಮೂಲಕ ಹೈಟೆಕ್ ಸಮೀಕ್ಷೆ
ಈ ಬಾರಿ ಸಮೀಕ್ಷೆಯನ್ನು ಸಂಪೂರ್ಣ ಪಾರದರ್ಶಕ ಹಾಗೂ ನಿಖರವಾಗಿ ನಡೆಸಲು ತಂತ್ರಜ್ಞಾನದ ಮೊರೆ ಹೋಗಲಾಗಿದೆ. ಇದಕ್ಕಾಗಿ ‘Crop Loss GT’ ಮೊಬೈಲ್ ಆ್ಯಪ್ ಬಳಸಲಾಗುತ್ತಿದ್ದು, ಸ್ಥಳದಲ್ಲಿಯೇ ಜಿಯೋ-ಟ್ಯಾಗ್ ಮಾಡಿದ ಛಾಯಾಚಿತ್ರಗಳು, ಜಿಪಿಎಸ್ ಮಾಹಿತಿ, ಜಮೀನಿನ ವಿವರ ಹಾಗೂ ಬೆಳೆ ಹಾನಿಯ ನಿಖರ ಪ್ರಮಾಣವನ್ನು ದಾಖಲಿಸಲಾಗುತ್ತದೆ.
ಇದನ್ನೂ ಓದಿ:
ಸೆ. 21ರೊಳಗೆ ಅಂತಿಮ ವರದಿ ಸಲ್ಲಿಕೆಗೆ ಗಡುವು
ಸೆ. 19 ಮತ್ತು 20ರಂದು ಅಧಿಕಾರಿಗಳ ವಿಶೇಷ ತಂಡಗಳು ಆಯ್ಕೆಯಾದ ಗ್ರಾಮಗಳ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಲಿವೆ. ಸೆ. 21ರೊಳಗಾಗಿ ಈ ಕುರಿತ ಅಂತಿಮ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಯಾವೊಬ್ಬ ಅರ್ಹ ರೈತನೂ ನೈಜ ಬೆಳೆ ಹಾನಿಯ ದಾಖಲೀಕರಣದಿಂದ ಹೊರಗುಳಿಯಬಾರದು ಎಂಬುದು ಸರ್ಕಾರದ ಆಶಯವಾಗಿದೆ. ಮುಂಗಾರು ಹಂಗಾಮು ಮುಗಿಯುವವರೆಗೂ ಈ ಮೇಲ್ವಿಚಾರಣೆ ಮುಂದುವರಿಯಲಿದ್ದು, ಪರಿಸ್ಥಿತಿಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೆ ಹೆಚ್ಚುವರಿ ತಾಲೂಕುಗಳನ್ನೂ ಸೇರಿಸಲಾಗುವುದು. ನೈಜ ಚಿತ್ರಣದ ಆಧಾರದ ಮೇಲೆ ನಿಯಮಾನುಸಾರ ರೈತರಿಗೆ ಅಗತ್ಯ ನೆರವು ತಲುಪಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ತಿಳಿಸಿದ್ದಾರೆ.



