March 20, 2026
Friday, March 20, 2026
spot_img

ಟ್ರಂಪ್ ಕೇಳ್ಕೊಂಡಿದ್ದರಿಂದ ಅಟ್ಯಾಕ್ ಮಾಡಲ್ಲ: ಇರಾನ್ ಅನಿಲ ಘಟಕಗಳ ಮೇಲೆ ದಾಳಿ ನಿಲ್ಲಿಸಿದ ಇಸ್ರೇಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವಿ ಹಿನ್ನೆಲೆ ಇರಾನ್‌ನ ಅನಿಲ ಉತ್ಪಾದನಾ ಘಟಕಗಳ ಮೇಲೆ ದಾಳಿ ನಿಲ್ಲಿಸುವುದಾಗಿ ಇಸ್ರೇಲ್ ಘೋಷಿಸಿದೆ. ಈ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾಹಿತಿ ನೀಡಿದ್ದಾರೆ.

ಅಮೆರಿಕ-ಇಸ್ರೇಲ್ ಸಂಯುಕ್ತ ಕಾರ್ಯಾಚರಣೆ ಕಳೆದ ಕೆಲವು ವಾರಗಳಿಂದ ನಡೆಯುತ್ತಿದ್ದು, ಇದರಿಂದ ಇರಾನ್‌ನ ಕ್ಷಿಪಣಿ, ಡ್ರೋನ್ ಮತ್ತು ಅಣು ಸಂಬಂಧಿತ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ ಎಂದು ಹೇಳಲಾಗಿದೆ. ಇರಾನ್‌ನ ಸೈನಿಕ ಸಾಮರ್ಥ್ಯವನ್ನು ಕುಗ್ಗಿಸುವಲ್ಲಿ ಈ ದಾಳಿಗಳು ಪ್ರಮುಖ ಪಾತ್ರ ವಹಿಸಿವೆ ಎಂದು ನೆತನ್ಯಾಹು ಹೇಳಿದ್ದಾರೆ.

ಇದನ್ನೂ ಓದಿ:

ಇನ್ನೊಂದೆಡೆ, ಇರಾನ್ ಪ್ರತಿದಾಳಿ ನಡೆಸಿದ ಪರಿಣಾಮ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಸುತ್ತ ಉದ್ಭವಿಸಿರುವ ಪರಿಸ್ಥಿತಿ ಜಾಗತಿಕ ಇಂಧನ ಸರಬರಾಜಿನ ಮೇಲೆ ಒತ್ತಡ ತಂದಿದೆ. ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ ಈ ಪ್ರದೇಶದಲ್ಲಿ ಅಸ್ಥಿರತೆ ಹೆಚ್ಚಾಗಿದೆ.

ಈ ಸಂಘರ್ಷದ ಪರಿಣಾಮವಾಗಿ ತೈಲ ಮತ್ತು ನೈಸರ್ಗಿಕ ಅನಿಲದ ಬೆಲೆಗಳು ಗಗನಕ್ಕೇರಿದ್ದು, ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 119 ಡಾಲರ್‌ ಮೀರಿದೆ. ಕಳೆದ ಕೆಲವು ವಾರಗಳಲ್ಲಿ ಇದರಲ್ಲಿ ಭಾರೀ ಏರಿಕೆ ದಾಖಲಾಗಿದೆ.

ಯುದ್ಧದ ಅವಧಿಯಲ್ಲಿ ಇರಾನ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವು ರಾಷ್ಟ್ರಗಳು ಈ ದಾಳಿಗಳನ್ನು ಖಂಡಿಸಿವೆ. ಇತ್ತ ಪರಿಸ್ಥಿತಿ ತಣಿಯುವ ಲಕ್ಷಣಗಳು ಇನ್ನೂ ಗೋಚರಿಸದೇ, ಜಾಗತಿಕ ಮಟ್ಟದಲ್ಲಿ ಆತಂಕ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !