ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಕಿನ ಹಬ್ಬ ದೀಪಾವಳಿ ದೇಶಾದ್ಯಂತ ಸಂಭ್ರಮದಿಂದ ಆಚರಣೆಯಾಗುತ್ತಿದ್ದರೆ, ಮತ್ತೊಂದೆಡೆ ಪಟಾಕಿಗಳ ಕಿಡಿ ಹಲವು ಕಡೆಗಳಲ್ಲಿ ಬೆಂಕಿ ಅವಘಡಗಳಿಗೆ ಕಾರಣವಾಗಿದೆ.
ರಾಜಸ್ಥಾನ, ದೆಹಲಿ, ಮಹಾರಾಷ್ಟ್ರ, ಜಮ್ಮು, ಸಿಕ್ಕಿಂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ ಘಟನೆಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದು, ಅಂಗಡಿಗಳು, ವಾಣಿಜ್ಯ ಮಳಿಗೆಗಳು ಹಾಗೂ ಮನೆಗಳಿಗೆ ಭಾರೀ ಹಾನಿಯಾಗಿದೆ.
ರಾಜಸ್ಥಾನದಲ್ಲಿ ಇಬ್ಬರು ಸಾವು
ರಾಜಸ್ಥಾನದ ಪಾಲಿ ಜಿಲ್ಲೆಯ ಫಲ್ನಾ ಪಟ್ಟಣದಲ್ಲಿ ಪಟಾಕಿ ಅಂಗಡಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಸಿಡಿಸಿದ ಪಟಾಕಿಗಳ ಕಿಡಿ ಅಂಗಡಿಗೆ ತಗುಲಿ ಬೆಂಕಿ ಹರಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೂರು ಅಂಗಡಿಗಳು ಹಾಗೂ ವಾಹನಗಳು ಬೆಂಕಿಗಾಹುತಿಯಾಗಿವೆ.
ದೆಹಲಿಯಲ್ಲಿ ಬಾಲಕನ ದುರಂತ ಅಂತ್ಯ
ಹೊರ ದೆಹಲಿಯ ನರೇಲಾದಲ್ಲಿ ಪಟಾಕಿ ಸಿಡಿಸುತ್ತಿದ್ದ 10 ವರ್ಷದ ಬಾಲಕನ ಹೊಟ್ಟೆಗೆ ರಾಕೆಟ್ ಪಟಾಕಿ ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:
ಪುಣೆಯಲ್ಲಿ 63 ಕಡೆ ಬೆಂಕಿ
ಮಹಾರಾಷ್ಟ್ರದ ಪುಣೆಯಲ್ಲಿ ಲಕ್ಷ್ಮೀ ಪೂಜೆಯ ದಿನವೇ 63 ಅಗ್ನಿ ಅವಘಡಗಳು ವರದಿಯಾಗಿವೆ. ಅಗ್ನಿಶಾಮಕ ಸಿಬ್ಬಂದಿ ಎಲ್ಲೆಡೆ ಬೆಂಕಿ ನಂದಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ. ನಾಗಪುರದ ಟಿವಿಎಸ್ ಶೋರೂಂನಲ್ಲೂ ಬೆಂಕಿ ಕಾಣಿಸಿಕೊಂಡು ಹಲವು ದ್ವಿಚಕ್ರ ವಾಹನಗಳು ಸುಟ್ಟುಹೋಗಿವೆ.
ಹಲವು ನಗರಗಳಲ್ಲಿ ಅಗ್ನಿ ಅವಘಡ
ಜಮ್ಮುವಿನ ನೆಹರು ಮಾರುಕಟ್ಟೆಯಲ್ಲಿ ಕನಿಷ್ಠ 12 ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಮುಂಬೈನ ಡೋಂಗ್ರಿ ಪ್ರದೇಶದಲ್ಲಿ ಅಂಗಡಿಗಳು ಮತ್ತು ವಸತಿ ಪ್ರದೇಶಗಳಿಗೆ ಬೆಂಕಿ ವ್ಯಾಪಿಸಿದೆ. ಥಾಣೆಯ 17 ಅಂತಸ್ತಿನ ಕಟ್ಟಡ, ಗ್ಯಾಂಗ್ಟಾಕ್‌ನ ಸರ್ಕಾರಿ ವಸತಿ ಹಾಗೂ ಉತ್ತರ ಪ್ರದೇಶದ ಬಾಂದಾದ ಸ್ಕ್ರ್ಯಾಪ್ ಅಂಗಡಿಯಲ್ಲೂ ಅಗ್ನಿ ಅವಘಡ ಸಂಭವಿಸಿದೆ.



