ಹೊಸದಿಗಂತ ವರದಿ,ಬೆಳಗಾವಿ :
ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಹಸುಗೂಸು ಏಕಾಏಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಾಗ ಪ್ರಕರಣಕ್ಕೆ ತಿರುವು ಸಿಕ್ಕಿದೆ.
ಹೆತ್ತ ತಂದೆಯೇ ಹೆಣ್ಣುಮಗು ಎಂಬ ಕಾರಣಕ್ಕೆ ವಿಷವುಣಿಸಿದ್ದು, ಕೊಲೆ ಮಾಡಿದ ಪಾಪಿ ತಂದೆಯನ್ನು ಕಾಕತಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಸುಗೂಸು ಕೊಲೆ ಆರೋಪಿ ಭೀಮರಾಯ ಚಿಪ್ಪಾಡೆ ತಂದೆ. ಮಾ.17ರಂದು ಉಕ್ಕಡ ಗ್ರಾಮದಲ್ಲಿ ಈ ಘಟನೆ ನಡೆದಿತ್ತು, 15 ದಿನದ ಹಸು ಗುಸು ಸಾವಿನ ಬಗ್ಗೆ ತಾಯಿ ಶೀಲಾ ಕಾಕತಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಳು, ಪ್ರಕರಣವನ್ನು ತನಿಖೆ ಕೈಗೊಂಡ ಪೊಲೀಸರು ಕೊಲೆ ಆರೋಪಿ ತಂದೆಯನ್ನು ಇದೀಗ ಬಂಧಿಸಿದ್ದಾರೆ.
ಇತ್ತೀಚೆಗೆ ಅಂದರೆ ಮಾರ್ಚ್ 17ರಂದು 15 ದಿನಗಳ ಹಿಂದೆ ಜನಿಸಿದ್ದ ಹಸುಗೂಸು ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಮಗುವಿನ ಸಾವಿಗೆ ತಂದೆಯೇ ಕಾರಣ ಎಂಬ ಗಂಭೀರ ಆರೋಪನ್ನು ಕುಟುಂಬಸ್ಥರೇ ಮಾಡಿದ್ದರು. ಒಂದು ವರ್ಷದ ಹಿಂದೆ ಭೀಮರಾಯ ಶೀಲಾರನ್ನು ಮದುವೆ ಆಗಿದ್ದರು.
ಕೂಲಿ ಕೆಲಸ ಮಾಡಿಕೊಂಡಿದ್ದ ಭೀಮರಾಯಗೆ ಗಂಡು ಮಕ್ಕಳೆಂದರೆ ಹುಚ್ಚು. ಆದರೆ 15 ದಿನದ ಹಿಂದೆ ಹೆಣ್ಣು ಮಗು ಆಗಿದ್ದಕ್ಕೆ ನೊಂದುಕೊಂಡಿದ್ದರು. ಪತ್ನಿ ತವರು ಮನೆಗೆ ಬಂದಿದ್ದ ಭೀಮರಾಯ ಮಗು ನೋಡಿ ವಾಪಾಸ್ ಹೋಗಿದ್ದರು. ಅವರು ಅತ್ತ ಹೋಗ್ತಿದ್ದಂತೆ ಮಗು ಅಸ್ವಸ್ಥಗೊಂಡಿತ್ತು. ಕೂಡಲೇ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆದರೆ ಅಷ್ಟರಲ್ಲಿ ಮಗು ಮೃತಪಟ್ಟಿತ್ತು. ಹತ್ತಿ ಬೆಳೆಗೆ ಸಿಂಪಡಣೆ ಮಾಡುವ ಔಷಧಿಯನ್ನು ಮಗುವಿಗೆ ಉಣಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು.
ಮಗುವನ್ನ ಬಿಮ್ಸ್ ಆಸ್ಪತ್ರೆ ಶವಗಾರಕ್ಕೆ ಶಿಫ್ಟ್ ಮಾಡಿ, ಮರಣೋತ್ತರ ಪರೀಕ್ಷೆಯ ಬಳಿಕವೇ ಮಗುವಿನ ಸಾವಿನ ನಿಖರ ಕಾರಣ ಬಹಿರಂಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಮಗು ಕಳೆದುಕೊಂಡ ತಾಯಿ ಹಾಗೂ ಕುಟುಂಬಸ್ಥರ ದುಃಖ ಮಡುಗಟ್ಟಿತ್ತು. ಇನ್ನು ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಡಿಸಿಪಿ ನಾರಾಯಣ್ ಭರಮನಿ, ಬೆಳಗಾವಿ ಗ್ರಾಮೀಣ ಎಸಿಪಿ ಹಾಗೂ ಕಾಕತಿ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮತ್ತೊಂದೆಡೆ ಆರೋಪ ಎದುರಿಸುತ್ತಿದ್ದ ಪತಿ ಭೀಮರಾಯ ನಾಪತ್ತೆ ಆಗಿದ್ದರು. ಬಂಧನಕ್ಕೆ ಪೊಲೀಸರು ಬಲೆ ಬೀಸಿ ಆರೋಪಿ ತಂದೆಯನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ.



