ಹೊಸದಿಗಂತ ವರದಿ,ಚಿತ್ರದುರ್ಗ :
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನಿಂದ ದೂರವಿದ್ದ ಪತ್ನಿಯ ಮೇಲೆ ಕೋಪಗೊಂಡ ವ್ಯಕ್ತಿ ತನ್ನ ಪತ್ನಿ, ಮಗಳು ಸೇರಿದಂತೆ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಅಲ್ಲದೇ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಚಿತ್ರದುರ್ಗ ನಗರದ ಮಾಳಪ್ಪನಹಟ್ಟಿಯಲ್ಲಿ ಬೆಳಕಿಗೆ ಬಂದಿದೆ.
ಮೊಹಮದ್ ಸುಹೇಲ್ (೪೪) ಎಂಬಾತನೇ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿರುವ ಆರೋಪಿ. ಈ ಘಟನೆಯಲ್ಲಿ ಆತನ ಪತ್ನಿ ತಾಸಿನಾಬಾನು, ಮಗಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಕೌಟುಂಬಿಕ ಕಲಹದ ಕಾರಣ ಇವರಿಬ್ಬರೂ ಕಳೆದ ಎಂಟು ತಿಂಗಳುಗಳಿಂದ ಪರಸ್ಪರ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಮೊಹಮದ್ ಸುಹೇಲ್ ಹಾಗೂ ತಾಸಿನಾಬಾನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ಮೊಹಮ್ಮದ್ ಸುಹೇಲ್ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ತಾಸಿನಾಬಾನು ಕೆಲ ತಿಂಗಳ ಹಿಂದಷ್ಟೇ ಬೆಂಗಳೂರು ನಗರ ಸೇರಿದ್ದಳು. ಇದೀಗ ರಂಜಾನ್ ಹಬ್ಬಕ್ಕೆಂದು ತಾಸಿನಾಬಾನು ಮಾಳಪ್ಪನಹಟ್ಟಿಯಲ್ಲಿರುವ ತನ್ನ ಸಹೋದರಿ ಮನೆಗೆ ಬಂದಿದ್ದರು. ಈ ವೇಳೆ ಏಕಾಏಕಿ ಮನೆಗೆ ನುಗ್ಗಿದ ಆರೋಪಿ ಮೊಹಮದ್ ಸುಹೇಲ್ ಆ್ಯಸಿಡ್ ದಾಳಿ ನಡೆಸಿದ್ದಾನೆ. ಬಳಿಕ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



