March 22, 2026
Sunday, March 22, 2026
spot_img

ಮಹಿಳೆಯ ಕೊಲೆಗೆ ಯತ್ನ: ಆರೋಪಿಯನ್ನು ಬಂಧಿಸಿದ ಬನವಾಸಿ ಪೊಲೀಸರು

ಹೊಸದಿಗಂತ ವರದಿ, ಬನವಾಸಿ:

ಮಹಿಳೆಯ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿತನನ್ನು ಬನವಾಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬನವಾಸಿ ಸಮೀಪದ ನರೂರು ಗ್ರಾಮದ ಕೃಷ್ಣಮೂರ್ತಿ ಹಿರಿಯಣ್ಣ ಆಚಾರಿ ಬಂಧಿತನಾಗಿದ್ದಾನೆ. ಯಡಗೊಪ್ಪ ಗ್ರಾಮದ ಹನುಮವ್ವ ಶಿವಶಂಕರ್ ಕುರುಬರ ಕಾಣೆಯಾಗಿದ್ದು, ಬಳಿಕ ನರೂರು ಗ್ರಾಮದ ಜಮೀನಿನಲ್ಲಿರುವ ಹಲಸಿನ ಮರದ ಕೆಳಗೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಗಾಯಾಳುವನ್ನು ವಿಚಾರಿಸಿದಾಗ, ಅಲ್ಪಸ್ವಲ್ಪ ಮಾತನಾಡುತ್ತ ಕೃಷ್ಣಮೂರ್ತಿ ಆಚಾರಿ ಹೊಡೆದು ಗಾಯಗೊಳಿಸಿದ್ದಾನೆ ಎಂದು ತಿಳಿಸಿದ್ದಾಳೆ.

ತಕ್ಷಣ ಆಕೆಯನ್ನು ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಬಲವಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ ಎಂದು ಯಡಗೊಪ್ಪದ ಸಂಜೀವ ಶಿವಶಂಕರ್ ಕುರುಬರ ಅವರು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !