ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ನಡೆಯಲಿರುವ ಕಾಮಗಾರಿಗಳ ಹಿನ್ನೆಲೆಯಲ್ಲಿ ಹಲವು ಪ್ರಯಾಣಿಕ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನರಿಮೊಗರು-ಪಡೀಲ್ ನಿಲ್ದಾಣಗಳ ನಡುವೆ ಬಿಸಿಎಂ ಕಾರ್ಯಕ್ಕಾಗಿ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಕೈಗೊಳ್ಳಲಾಗುತ್ತಿರುವುದರಿಂದ ರೈಲು ಸೇವೆಗಳು ರದ್ದುಪಡಿಸಲಾಗುವುದು, ನಿಯಂತ್ರಿಸಲಾಗುವುದು ಹಾಗೂ ಮರುನಿಗದೀಕರಿಸಲಾಗುವುದು.
56629 ಮಂಗಳೂರು-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ಹಾಗೂ 56630 ಸುಬ್ರಹ್ಮಣ್ಯ ರೋಡ್-ಮಂಗಳೂರು ಪ್ಯಾಸೆಂಜರ್ ರೈಲುಗಳನ್ನು ಮಾ.23ರಿಂದ ಏ.14 ರವರೆಗೆ ಹಾಗೂ ಜೂ.10ರಿಂದ ಜೂ.21ರವರೆಗೆ ಒಟ್ಟು 35 ದಿನಗಳ ಕಾಲ ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲುಗಳು ವಿಳಂಬ
ಇನ್ನೂ ಕೆಲವು ರೈಲುಗಳನ್ನು ನಿರ್ದಿಷ್ಟ ದಿನಗಳಲ್ಲಿ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತಿದೆ. 16515 ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್, 16575 ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್ ಹಾಗೂ 16539 ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲುಗಳು ಏಪ್ರಿಲ್ ತಿಂಗಳಲ್ಲಿ ನಿಗದಿತ ದಿನಗಳಲ್ಲಿ ಸಂಚರಿಸುವ ವೇಳೆ ಸುಮಾರು 20 ನಿಮಿಷಗಳಷ್ಟು ವಿಳಂಬವಾಗಲಿದೆ. ಅದೇ ರೀತಿ 56229 ಮಂಗಳೂರು- ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು ಏ.21ರಿಂದ ಜೂ.9 ರವರೆಗೆ 50 ದಿನಗಳ ಕಾಲ ಸುಮಾರು 55 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ.
ಮರು ನಿಗದಿ
56630 ಸುಬ್ರಹ್ಮಣ್ಯ ರೋಡ್-ಮಂಗಳೂರು ಪ್ಯಾಸೆಂಜರ್ ರೈಲು ಏ.21ರಿಂದ ಜೂ.9ರವರೆಗೆ ಆಯ್ದ 22 ದಿನಗಳಲ್ಲಿ ಸುಮಾರು 15 ನಿಮಿಷ ತಡವಾಗಿ ಸಂಚರಿಸುವಂತೆ ಮರುನಿಗದಿ ಮಾಡಲಾಗಿದೆ. ಸರಕು ರೈಲುಗಳ ಸಂಚಾರಕ್ಕೆ ಹೆಚ್ಚಿನ ಅಡ್ಡಿಗಳು ಆಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಅಗತ್ಯವಿದ್ದಲ್ಲಿ ಬ್ಲಾಕ್‌ಗಳನ್ನು ಮುಂದೂಡುವ ಅಥವಾ ರದ್ದುಪಡಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರುನಿಗದೀಕರಣ
ರೈಲು ಸಂಖ್ಯೆ 56229ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು ಏ.21ರಿಂದ ಜೂ.9ರವರೆಗೆ ಮಾರ್ಗ ಮಧ್ಯದಲ್ಲಿ 55 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ರೈಲು ಸಂಖ್ಯೆ56630 ಸುಬ್ರಹ್ಮಣ್ಯ ರೋಡ್-ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಏ.21,-ಜೂ.9 ರವರೆಗೆ 15 ನಿಮಿಷ ತಡವಾಗಿ ಮರುನಿಗದೀಕರಣಗೊಳಿಸಲಾಗಿದೆ. ಪ್ರಯಾಣಿಕರು ಮೇಲ್ಕಂಡ ಬದಲಾವಣೆ ಗಳನ್ನು ಗಮನಿಸಬೇಕಾಗಿ ಮೈಸೂರು ರೈಲ್ವೆ ವಿಭಾಗದ ಜನಸಂಪರ್ಕಕ ಅಧಿಕಾರಿ ಹಾಗೂ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ್ ಧರ್ಮರಾಜ್ ಕಲಗೊಂಡ ವಿನಂತಿಸಿದ್ದಾರೆ.



