May 10, 2026
Sunday, May 10, 2026
spot_img

ಕೇಂದ್ರ ಸಚಿವರ ಹೆಸರಿನಲ್ಲಿ ನಕಲಿ ವಿಡಿಯೋ: ಮೋಸದ ಜಾಲಕ್ಕೆ ಬಿದ್ದು 7.9 ಲಕ್ಷ ಕಳೆದುಕೊಂಡ ವ್ಯಕ್ತಿ

ಹೊಸ ದಿಗಂತ ವರದಿ, ಬೆಳಗಾವಿ :

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಕಲಿ ವಿಡಿಯೋ ಸೃಷ್ಟಿಸಿ ಹಿರಿಯ ನಾಗರಿಕರೊಬ್ಬರಿಗೆ ಲಕ್ಷಾಂತರ ರೂಪಾಯಿ ಸೈಬರ್ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ನಗರದ ವಂಟಮೂರಿ ಕಾಲೋನಿಯ ಪ್ರಕಾಶ ಗುಬ್ಬಿ (76) ಅವರು ವಂಚನೆಗೆ ಒಳಗಾದ ವ್ಯಕ್ತಿ.

ಕೊಲ್ಹಾಪುರ ಮೂಲದ ಆದರ್ಶ ಆನಂದ ಹಾಗೂ ಮಹಾರಾಷ್ಟ್ರದ ಬುಲ್ದಾಣಾ ಮೂಲದ ದಾಮೋದರ ಆರೋಪಿಗಳ ವಿರುದ್ದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಭಾರಿ ಲಾಭ ಪಡೆಯಿರಿ ಅಂತಾ ಮಾತನಾಡಿರುವ ಜಾಹೀರಾತು ವಿಡಿಯೋ ನೋಡಿ ಮರುಳಾಗಿ, ಹಣ ಹೂಡಿಕೆ ಮಾಡಿ ಸುಮಾರು 7.9 ಲಕ್ಷ ರೂ. ಹಣವನ್ನು ಪ್ರಕಾಶ ಗುಬ್ಬಿ ಅವರು ಕಳೆದುಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು, ಹಿಂದಿನ ವರ್ಷ ನವೆಂಬರ್ ತಿಂಗಳಲ್ಲಿ ಪ್ರಕಾಶ ಗುಬ್ಬಿ ಅವರು ಯೂಟ್ಯೂಬ್ನಲ್ಲಿ ಒಂದು ವಿಡಿಯೋ ನೋಡಿದ್ದಾರೆ. ಅದರಲ್ಲಿ ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ಹಣ ಹೂಡಿಕೆ ಯೋಜನೆಗೆ ಜಾಹೀರಾತು ಮಾಡಿರುವುದನ್ನು ತೋರಿಸಿದ್ದಾರೆ. ವಿಡಿಯೋ ಕೆಳಗೆ ಡಿಸ್ಕ್ರಿಪ್ಷನ್ ನಲ್ಲಿ ಹಾಕಿದ್ದ ಲಿಂಕ್ ಓಪನ್ ಮಾಡಿ, ತಮ್ಮ ವಿವರವನ್ನು ಪ್ರಕಾಶ ಅವರು ಹಾಕಿದ್ದಾರೆ. ನಂತರ 044 ನಂಬರ್ ನಿಂದ ಶುರುವಾಗುವ ಮೊಬೈಲ್ ನಂಬರ್ ನಿಂದ ಆದರ್ಶ ಆನಂದ ಎಂಬ ವ್ಯಕ್ತಿ ಪ್ರಕಾಶ ಗುಬ್ಬಿ ಅವರಿಗೆ ಕಾಲ್ ಮಾಡಿ, ಹಣ ಹೂಡಿಕೆ ಮಾಡಿಸಿದ್ದಾನೆ. ಆ ಬಳಿಕ ನಿಮಗೆ 65 ಸಾವಿರ ಡಾಲರ್ ಲಾಭ ಆಗಿದೆ ಎಂದಿದ್ದಾನೆ. ಈ ದುಡ್ಡು ವಿಥ್ ಡ್ರಾ ಮಾಡಬೇಕು ಎಂದರೆ ₹4 ಲಕ್ಷ ಕಸ್ಟಮ್ ಫೀಸ್ ತುಂಬಬೇಕು ಅಂತಾ ಹೇಳಿದ್ದಾನೆ. ಮತ್ತೆ 2 ಲಕ್ಷ ತುಂಬಿಸಿಕೊಂಡು, ಹೀಗೆ ಒಟ್ಟು 7.9 ಲಕ್ಷ ರೂ. ಹಣ ಮೋಸ ಮಾಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಮೇ ತಿಂಗಳಲ್ಲಿ ಮೋಸಕ್ಕೆ ಒಳಗಾದ ಪ್ರಕಾಶ ಗುಬ್ಬಿ ದೂರು ದಾಖಲಿಸಿದ್ದಾರೆ. ಮ್ಯೂಲ್ ಅಕೌಂಟ್ ಮೂಲಕ ಆರೋಪಿಗಳು ಹಣ ವರ್ಗಾಯಿಸಿಕೊಂಡಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತಾಡಿದಂತೆ ಎಐ ಮೂಲಕ ಡೀಪ್ ಫೇಕ್ ವಿಡಿಯೋ ಸೃಷ್ಟಿಸಿ ಮೋಸ ಮಾಡಲಾಗಿದೆ ಎಂದು ಹೇಳಿದರು.

ವಿಡಿಯೋ ನಂಬಿ ಹಣ ಹೂಡಿಕೆ ಮಾಡಬೇಡಿ: ಯಾರೋ ಫೋನ್ ಮಾಡಿ ಹಣ ಹೂಡಿಕೆ ಮಾಡುವಂತೆ ಹೇಳಿದರೆ ಅದಕ್ಕೆ ಸ್ಪಂದಿಸಬೇಡಿ. ಯೂಟ್ಯೂಬ್ ನಲ್ಲಿ ಬರುವ ಇಂಥ ವಿಡಿಯೋಗಳನ್ನು ಸಾರ್ವಜನಿಕರು ಯಾವುದೇ ಕಾರಣಕ್ಕೂ ನಂಬಬಾರದು. ಸೈಬರ್ ವಂಚನೆಯಲ್ಲಿ ಹಣ ಹೂಡಿಕೆ ಹಗರಣಗಳೇ ಹೆಚ್ಚು ಕಂಡುಬರುತ್ತಿವೆ. ಸರ್ಕಾರಿ ಬ್ಯಾಂಕ್ಗಳಿಗಿಂತ ಹೆಚ್ಚು ಹಣ ಕೊಡುತ್ತೇವೆ ಅಂತಾ ಯಾವುದಾದರೂ ಖಾಸಗಿ ಬ್ಯಾಂಕ್, ವ್ಯಕ್ತಿಗಳು ಹೇಳಿದರೆ ಆ ಬಗ್ಗೆ ಎಚ್ಚರ ವಹಿಸಬೇಕೆಂದು ಸಾರ್ವಜನಿಕರಿಗೆ ಪೊಲೀಸ್ ಕಮಿಷನರ್ ಮನವಿ ಮಾಡಿಕೊಂಡರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !