ಬಿಸಿಲಿನ ದಿನಗಳಲ್ಲಿ ತಾಜಾತನ ನೀಡುವ, ಹೊಟ್ಟೆಗೆ ಹಿತವಾದ, ರುಚಿಯಾದ ಅಡುಗೆ ಎಂದರೆ ಲೆಮನ್ ರಸಂ. ಮಾಮೂಲಿ ರಸಂಗೆ ಬದಲಾಗಿ, ಲಿಂಬೆಹಣ್ಣಿನ ಸುವಾಸನೆ ಮತ್ತು ಹುಳಿ ರುಚಿಯಿಂದ ಈ ರಸಂ ವಿಶೇಷವಾಗುತ್ತದೆ. ಕಡಿಮೆ ಪದಾರ್ಥಗಳಲ್ಲಿ ಬೇಗನೆ ತಯಾರಿಸಬಹುದಾದ ಈ ರಸಂ ಅನ್ನದ ಜೊತೆ ಸೂಪರ್ ಕಾಂಬಿನೇಷನ್.
ಬೇಕಾಗುವ ಪದಾರ್ಥಗಳು:
ತೊಗರಿಬೇಳೆ – 1/2 ಕಪ್
ಲಿಂಬೆಹಣ್ಣಿನ ರಸ – 2 ಟೇಬಲ್ ಸ್ಪೂನ್
ಟೊಮ್ಯಾಟೊ – 1
ಹಸಿಮೆಣಸು – 1
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಅರಿಶಿನ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಸಾಸಿವೆ – 1/2 ಟೀ ಸ್ಪೂನ್
ಜೀರಿಗೆ – 1/2 ಟೀ ಸ್ಪೂನ್
ಬೆಳ್ಳುಳ್ಳಿ – 2 ಕೊಕ್ಕೆ (ಐಚ್ಛಿಕ)
ತುಪ್ಪ ಅಥವಾ ಎಣ್ಣೆ – 1 ಟೇಬಲ್ ಸ್ಪೂನ್
ನೀರು – ಅಗತ್ಯಕ್ಕೆ
ಮಾಡುವ ವಿಧಾನ:
ಮೊದಲು ತೊಗರಿಬೇಳೆಯನ್ನು ಚೆನ್ನಾಗಿ ಬೇಯಿಸಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ನೀರು, ಟೊಮ್ಯಾಟೊ, ಹಸಿಮೆಣಸು, ಅರಿಶಿನ ಮತ್ತು ಉಪ್ಪು ಹಾಕಿ ಕುದಿಸಿಕೊಳ್ಳಿ.
ನಂತರ ಬೇಯಿಸಿದ ಬೇಳೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕುದಿಯಲು ಆರಂಭವಾದಾಗ ಬೆಂಕಿಯನ್ನು ಕಡಿಮೆ ಮಾಡಿ, ಸ್ವಲ್ಪ ತಣಿದ ನಂತರ ಲಿಂಬೆಹಣ್ಣಿನ ರಸ ಸೇರಿಸಿ (ಕುದಿಯುತ್ತಿರುವಾಗ ಹಾಕಬೇಡಿ).
ಒಂದು ಸಣ್ಣ ಬಾಣಲೆಯಲ್ಲಿ ತುಪ್ಪ ಹಾಕಿ, ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ. ಈ ಒಗ್ಗರಣೆಯನ್ನು ರಸಂಗೆ ಸೇರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.



