October 11, 2026
Sunday, October 11, 2026
spot_img

ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್‌! ದಾಖಲೆ ಪರಿಶೀಲನೆಗೆ ಅ. 31ರವರೆಗೆ ಗಡುವು ವಿಸ್ತರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದ ಮಹತ್ವದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ತಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳಲು ಮತ್ತೊಂದು ತಿಂಗಳ ಕಾಲಾವಕಾಶ ನೀಡಲಾಗಿದೆ.

ಫಲಾನುಭವಿಗಳ ಮರುಪರಿಶೀಲನೆಗೆ ನೀಡಲಾಗಿದ್ದ ಗಡುವನ್ನು ವಿಸ್ತರಿಸಲಾಗಿದ್ದು, ಈಗ ಅಕ್ಟೋಬರ್ 31ರೊಳಗೆ ಪರಿಶೀಲನೆ ಹಾಗೂ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಯೋಜನೆಯ ಪ್ರಯೋಜನ ಅರ್ಹ ಕುಟುಂಬಗಳಿಗೆ ತಲುಪಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಜುಲೈನಲ್ಲಿ ಆರಂಭವಾಗಿದ್ದ ಮರುಪರಿಶೀಲನೆ

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನಾ ಕಾರ್ಯ ಜುಲೈ 1ರಿಂದ ಆರಂಭವಾಗಿತ್ತು. ಆರಂಭದಲ್ಲಿ ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಬಳಿಕ ಮನೆ ಮಾಲೀಕರು ಮತ್ತು ಬಾಡಿಗೆದಾರರಿಂದ ಹೆಚ್ಚುವರಿ ದಾಖಲೆಗಳನ್ನು ಸಂಗ್ರಹಿಸುವ ಅಗತ್ಯವಿದ್ದ ಹಿನ್ನೆಲೆಯಲ್ಲಿ ಗಡುವನ್ನು ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಒಂದು ತಿಂಗಳ ಕಾಲಾವಕಾಶ ನೀಡಿರುವುದರಿಂದ, ಒಟ್ಟು ನಾಲ್ಕು ತಿಂಗಳ ಅವಧಿಯಲ್ಲಿ ಪರಿಶೀಲನಾ ಕಾರ್ಯ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ:

ಮನೆಮನೆಗೆ ತೆರಳಿ ದಾಖಲೆ ಪರಿಶೀಲನೆ

ವಿದ್ಯುತ್ ಸರಬರಾಜು ಕಂಪನಿಗಳ ಸಿಬ್ಬಂದಿ ಹಾಗೂ ಮೀಟರ್ ರೀಡರ್‌ಗಳು ಮನೆಮನೆಗೆ ತೆರಳಿ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಈ ವೇಳೆ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಅರ್ಜಿದಾರರ ಭಾವಚಿತ್ರ, ವರ್ಗ, ಆದಾಯ ತೆರಿಗೆ ಪಾವತಿ ಸ್ಥಿತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ.

ಈ ಹಿಂದೆ ಮಾಹಿತಿ ಲಭ್ಯವಾಗದ ಮನೆಗಳು, ಬೀಗ ಹಾಕಿರುವ ಮನೆಗಳು ಹಾಗೂ ಖಾಲಿ ಇರುವ ಮನೆಗಳ ವಿವರಗಳನ್ನೂ ಮರುಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಮಾಹಿತಿ ನೀಡಲು ನಿರಾಕರಿಸಿದ್ದ ಸ್ಥಳಗಳು ಮತ್ತು ಶಾಶ್ವತವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಮನೆಗಳ ಬಗ್ಗೆಯೂ ಪರಿಶೀಲನೆ ನಡೆಸಲು ಸೂಚಿಸಲಾಗಿದೆ.

ಸೋಲಾರ್ ಮನೆಗಳಿಗೂ ಪರಿಶೀಲನೆ

ಮನೆಗಳ ವಿದ್ಯುತ್ ಸುಂಕದ ವರ್ಗದಲ್ಲಿ ಬದಲಾವಣೆಗಳಾಗಿರುವ ಪ್ರಕರಣಗಳು ಹಾಗೂ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಹೊಂದಿರುವ ಮನೆಗಳ ವಿವರಗಳನ್ನೂ ಪರಿಶೀಲಿಸಲಾಗುತ್ತದೆ. ಸಂಗ್ರಹಿಸಿದ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ ದಾಖಲೆಗಳನ್ನು ನವೀಕರಿಸುವ ಕಾರ್ಯವನ್ನು ಅಕ್ಟೋಬರ್ 31ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

Must Read