March 23, 2026
Monday, March 23, 2026
spot_img

ರಾಜ್ಯದ ಅತೀ ಹೆಚ್ಚು ಬಂದೂಕು ಹೊಂದಿದ ಜಿಲ್ಲೆಯಲ್ಲೀಗ ನಾಗರಿಕರಿಗೂ ಸಿಗುತ್ತಿದೆ ಬಂದೂಕು ತರಬೇತಿ!

ಹೊಸದಿಗಂತ ವರದಿ ​ಮಡಿಕೇರಿ:

ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿರುವ ನಾಗರಿಕ ಬಂದೂಕು ತರಬೇತಿ ಶಿಬಿರಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಕು.ಬಿಂದುಮಣಿ ಆರ್.ಎನ್. ಅವರು ಸೋಮವಾರ ಚಾಲನೆ ನೀಡಿದರು.

ನಗರದ ‘ಮೈತ್ರಿ’ ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಪ್ರಥಮ ತಂಡದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು. ಪರವಾನಗಿ ಇದ್ದ ಮಾತ್ರಕ್ಕೆ ಎಲ್ಲಾ ಬಂದೂಕುಗಳನ್ನು ಬಳಸಲು ಅವಕಾಶವಿಲ್ಲ. ಅವರವರ ಲೈಸೆನ್ಸ್’ನಲ್ಲಿ ನಮೂದಾಗಿರುವ ನಿಗದಿತ ಬಂದೂಕುಗಳನ್ನೇ ಬಳಸಬೇಕು. ಮತ್ತೊಬ್ಬರ ಹೆಸರಿ‌ನಲ್ಲಿರುವ ಆಯುಧವನ್ನು ಬಳಸಿದರೆ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ಬಂದೂಕು ಹಿಡಿದು ಓಡಾಡುವುದು ಕೂಡಾ ಅಪರಾಧವಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ:

ಕೊಡಗು ರಾಜ್ಯದಲ್ಲಿ ಅತಿ ಹೆಚ್ಚು ಬಂದೂಕು ಇರುವ ಜಿಲ್ಲೆಯಾಗಿದ್ದು, ಬಂದೂಕು ಆಕಸ್ಮಿಕವಾಗಿ ಸಿಡಿದು ಅನಾಹುತವಾದರೂ, ಉದ್ದೇಶಪೂರ್ವಕವಾಗಿ ಗುಂಡು ಹಾರಿಸಿ ದುರ್ಘಟನೆಗಳಾದರೂ ಕಾನೂನು ಕ್ರಮ ಒಂದೇ ಆಗಿರುತ್ತದೆ.‌ ಆದುದರಿಂದ ಬಂದೂಕು ಬಳಸುವಾಗ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಮತ್ತು ಜಾಗೃತಿ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.

ಇಂಡಿಯನ್ ಆರ್ಮ್ಸ್ ಆಕ್ಟ್’ನಲ್ಲಿ ಅಪರಾಧಕ್ಕೆ ಜಾಮೀನು ಸಿಗುವುದು ಕಷ್ಟ. ಆದ್ದರಿಂದ ಪ್ರತಿಯೊಬ್ಬರೂ ರಕ್ಷಣೆಗೆ ಅಗತ್ಯವಿರುವ ತರಬೇತಿ ಪಡೆಯಬೇಕು. ಸಮಯ ಕಳೆಯುವುದಕ್ಕಾಗಿ ಶಿಬಿರಕ್ಕೆ ಬರಬೇಡಿ. ಸರಿಯಾಗಿ ತರಬೇತಿ ಪಡೆಯಿರಿ ಮತ್ತು ಅರ್ಥವಾಗದಿರುವುದನ್ನು ಕೇಳಿ ಕಲಿತುಕೊಳ್ಳಿ. ಸರಿಯಾಗಿ ತರಬೇತಿ ಹೊಂದಿದವರಿಗೆ ಮಾತ್ರ ಕೊನೆಯಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಬಿಂದುಮಣಿ ಸಲಹೆ ಮಾಡಿದರು.

ಜಿಲ್ಲಾ ಸಶಸ್ತ್ರ ಪಡೆಗಳ ಪೊಲೀಸ್ ನಿರೀಕ್ಷಕ ಹೆಚ್.ಬಿ.ಗಣೇಶ್ ಅವರು ತರಬೇತಿ ನೀಡಿದರು. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ನಾಗರಿಕ ಬಂದೂಕು ತರಬೇತಿ ನಡೆಯದ ಹಿನ್ನೆಲೆಯಲ್ಲಿ ಈ ಬಾರಿ ಎರಡು ತಂಡಗಳಲ್ಲಿ ತರಬೇತಿ ನೀಡಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !