ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಟೀಕೆ ಮಾಡಿರುವ ಇಟಲಿಯ ರಾಜಕೀಯ ನಾಯಕ ಜಿಯಾಕೊಮೊ ಫಿಲಿಬೆಕ್ ಅವರಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಆಡಳಿತ ಮೈತ್ರಿಕೂಟದ ನಾಯಕಿ ಡೆಬೊರಾ ಬೆರ್ಗಾಮಿನಿ ತಿರುಗೇಟು ನೀಡಿದ್ದಾರೆ.
97 ಕೋಟಿ ಮತದಾರರನ್ನು ಹೊಂದಿರುವ ಭಾರತಕ್ಕೆ ಯುರೋಪಿಯನ್ನರು ಪ್ರಜಾಪ್ರಭುತ್ವದ ಪಾಠ ಹೇಳುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಮೆಲೋನಿ ಸರ್ಕಾರದ ಮೈತ್ರಿಕೂಟದ ಭಾಗವಾಗಿರುವ ಫೋರ್ಜಾ ಇಟಾಲಿಯಾ ಪಕ್ಷದ ನಾಯಕಿ ಬೆರ್ಗಾಮಿನಿ, ಭಾರತದ ಚುನಾವಣಾ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಭಾರತದ ಆಂತರಿಕ ರಾಜಕೀಯ ವಿಚಾರಗಳಲ್ಲಿ ವಿದೇಶಿ ನಾಯಕರು ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ ಎಂದು ಫೇಸ್‌ಬುಕ್ ಪೋಸ್ಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ವೇದಿಕೆಯಲ್ಲಿ ಫಿಲಿಬೆಕ್ ಹೇಳಿಕೆಗೆ ಆಕ್ಷೇಪ
ಹೈದರಾಬಾದ್‌ನಲ್ಲಿ ನವೆಂಬರ್ 14ರಂದು ನಡೆದ ಭಾರತ್ ಶೃಂಗಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಯುರೋಪಿಯನ್ ಸೋಷಿಯಲಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜಿಯಾಕೊಮೊ ಫಿಲಿಬೆಕ್, ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಆರೋಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತು ಬಿಜೆಪಿ ವಿರುದ್ಧ ‘ವೋಟ್ ಚೋರ್, ಗದ್ದಿ ಛೋಡ್’ ಘೋಷಣೆಯನ್ನೂ ಮೊಳಗಿಸಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬೆರ್ಗಾಮಿನಿ, ಪ್ರಜಾಪ್ರಭುತ್ವದಲ್ಲಿ ಆರೋಪಗಳನ್ನು ಮಾಡುವ ಸ್ವಾತಂತ್ರ್ಯವಿದೆ. ಆದರೆ ಅವುಗಳಿಗೆ ಸೂಕ್ತ ಸಾಕ್ಷ್ಯಗಳಿರಬೇಕು ಎಂದು ಹೇಳಿದ್ದಾರೆ. ಭಾರತ ಮತ್ತು ಇಟಲಿ ವಿಶೇಷ ಕಾರ್ಯತಂತ್ರದ ಪಾಲುದಾರ ರಾಷ್ಟ್ರಗಳಾಗಿದ್ದು, ಇಂತಹ ಸ್ನೇಹಪರ ದೇಶದ ಆಂತರಿಕ ರಾಜಕೀಯ ಚರ್ಚೆಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ
ಇನ್ನೊಂದೆಡೆ, ಭಾರತ್ ಶೃಂಗಸಭೆಯಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಖಂಡಿಸಿದ್ದಾರೆ. ಚುನಾವಣಾ ಸೋಲಿನ ಹತಾಶೆಯಿಂದ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.



