March 23, 2026
Monday, March 23, 2026
spot_img

ನಡುರಸ್ತೆಯಲ್ಲೇ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಂ*ದ ಪಾಪಿ ಪತಿ

ಹೊಸದಿಗಂತ ಬೆಳಗಾವಿ:

ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಪತಿ ಕಲ್ಲಿನಿಂದ ಜಜ್ಜಿ ಕ್ರೂರವಾಗಿ ಕೊಲೆ ಮಾಡಿರುವ ಕರುಣಾಜನಕ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಶಿವಕ್ಕ ಬಸವರಾಜ್ ಜೋಡಳ್ಳಿ (33) ಎಂದು ಗುರುತಿಸಲಾಗಿದೆ. ಶಿವಕ್ಕ ತನ್ನ ಮೊದಲ ಪತಿಯ ನಿಧನದ ನಂತರ, ಬಸವರಾಜನನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹವಾಗಿದ್ದರು. ಸುಮಾರು 15 ವರ್ಷಗಳ ಕಾಲ ಇವರ ದಾಂಪತ್ಯ ಸುಗಮವಾಗಿಯೇ ಇತ್ತು. ಆದರೆ, ಕಳೆದ ಐದಾರು ವರ್ಷಗಳಿಂದ ಕೌಟುಂಬಿಕ ಕಲಹ ತಾರಕಕ್ಕೇರಿತ್ತು. ಇದರಿಂದಾಗಿ ಶಿವಕ್ಕ ತನ್ನ ಇಬ್ಬರು ಮಕ್ಕಳೊಂದಿಗೆ ನರಗುಂದದ ಮಠವೊಂದರಲ್ಲಿ ಆಶ್ರಯ ಪಡೆದಿದ್ದರು. ಇತ್ತ ಬಸವರಾಜ ಡ್ರೈವರ್ ಕೆಲಸ ಮಾಡುತ್ತಾ, ಹಿರಿಯ ಮಗಳನ್ನು ತನ್ನ ತಾಯಿಯ ಬಳಿ ಬಿಟ್ಟಿದ್ದನು.

ಮೂರು ದಿನಗಳ ಹಿಂದಷ್ಟೇ ಶಿವಕ್ಕ ನರಗುಂದದಿಂದ ಗೋವನಕೊಪ್ಪ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಹಿರಿಯ ಮಗಳ ವಿಚಾರವಾಗಿ ದಂಪತಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಕ್ಷಣಿಕ ಕೋಪದಲ್ಲಿ ಮೃಗವಾಗಿ ಬದಲಾದ ಬಸವರಾಜ, ತನ್ನ ತಂದೆಯ ಮನೆಯಲ್ಲಿದ್ದ ಶಿವಕ್ಕನನ್ನು ಹಾಸಿಗೆಯಿಂದಲೇ ಎಳೆದುಕೊಂಡು ಬಂದು, ಎಲ್ಲರೂ ನೋಡುತ್ತಿರುವಂತೆಯೇ ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಸ್ಥಳಕ್ಕೆ ಧಾವಿಸಿದ ಬೈಲಹೊಂಗಲ ಪೊಲೀಸರು ಆರೋಪಿ ಬಸವರಾಜನನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 15 ವರ್ಷಗಳ ಸುದೀರ್ಘ ಪ್ರೀತಿ ಹೀಗೆ ರಕ್ತಸಿಕ್ತವಾಗಿ ಅಂತ್ಯಗೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಮತ್ತು ವಿಷಾದ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !