March 23, 2026
Monday, March 23, 2026
spot_img

ಅಧಿಕಾರಿಯ ಆತ್ಮಹ*ತ್ಯೆ ಕೇಸ್: ‘ಆಪ್’ ಶಾಸಕ ಲಾಲ್ಜಿತ್ ಸಿಂಗ್ ಭುಲ್ಲರ್ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಉಗ್ರಾಣ ನಿಗಮದ ಅಧಿಕಾರಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಗಂಭೀರ ಆರೋಪದ ಮೇಲೆ ಪಂಜಾಬ್‌ನ ಮಾಜಿ ಸಚಿವ ಹಾಗೂ ಆಮ್ ಆದ್ಮಿ ಪಾರ್ಟಿ ಶಾಸಕ ಲಾಲ್ಜಿತ್ ಸಿಂಗ್ ಭುಲ್ಲರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅಮೃತಸರದ ರಾಜ್ಯ ಉಗ್ರಾಣ ನಿಗಮದಲ್ಲಿ ಜಿಲ್ಲಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗಗನ್‌ದೀಪ್ ಸಿಂಗ್, ಶನಿವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಗಗನ್‌ದೀಪ್ ವೀಡಿಯೋವೊಂದನ್ನು ಚಿತ್ರೀಕರಿಸಿದ್ದು, ಅದರಲ್ಲಿ ಸಚಿವ ಲಾಲ್ಜಿತ್ ಸಿಂಗ್ ಅವರು ತಮಗೆ ನೀಡುತ್ತಿದ್ದ ಅತಿಯಾದ ಕಿರುಕುಳವೇ ತಮ್ಮ ಸಾವಿಗೆ ಕಾರಣ ಎಂದು ಕಣ್ಣೀರು ಹಾಕುತ್ತಾ ಆರೋಪಿಸಿದ್ದರು.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಲಾಲ್ಜಿತ್‌ಗೆ ಸೂಚಿಸಿದ್ದರು. ಅದರಂತೆ ಅವರು ಪದತ್ಯಾಗ ಮಾಡಿದ್ದರು. ಇತ್ತ ಮೃತರ ಕುಟುಂಬಸ್ಥರು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಬೇಕೆಂದು ಪಟ್ಟು ಹಿಡಿದಿದ್ದರು.

ಪೊಲೀಸರು ಕೇವಲ ಲಾಲ್ಜಿತ್ ಸಿಂಗ್ ಮಾತ್ರವಲ್ಲದೆ, ಅವರ ತಂದೆ ಸುಖ್‌ದೇವ್ ಸಿಂಗ್ ಭುಲ್ಲರ್ ಮತ್ತು ಆಪ್ತ ಸಹಾಯಕ ದಿಲ್‌ಬಾಗ್ ಸಿಂಗ್ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಬಂಧಿತ ಶಾಸಕನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಈ ಘಟನೆ ಪಂಜಾಬ್ ಸರ್ಕಾರಕ್ಕೆ ಮುಜುಗರ ತಂದಿಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !