ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ನಂತರ ವಾಯುಮಾಲೀನ್ಯದ ಪ್ರಮಾಣ ಮತ್ತಷ್ಟು ತೀವ್ರಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಐದು ಪ್ರಮುಖ ಪ್ರದೇಶಗಳಲ್ಲಿರುವ ಗಾಳಿ ಮಕ್ಕಳಿಗೆ ಅಸುರಕ್ಷಿತವಾಗಿದ್ದು, ಶಾಲೆಗಳಿಗೆ ಬೀಗ ಹಾಕಿ ಆನ್‌ಲೈನ್ ಕ್ಲಾಸ್ ಆರಂಭಿಸಲಾಗುತ್ತಿದೆ.
ಹೌದು, ನೋಯ್ಡಾ, ಗಾಜಿಯಾಬಾದ್ ಹಾಗೂ ಗುರುಗ್ರಾಮದಲ್ಲಿ ಪ್ರಾಣವಾಯು ವಿಷದಂತಾಗಿದ್ದು, ಮಕ್ಕಳ ಹಿತದೃಷ್ಟಿಯಿಂದಾಗಿ ಐದನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಹೈಬ್ರಿಡ್ ಶಿಕ್ಷಣ ವ್ಯವಸ್ಥೆ ಜಾರಿ ಮಾಡಲಾಗಿದೆ. ಶಾಲೆಗಳು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾಧ್ಯಮಗಳಲ್ಲಿ ತರಗತಿಗಳನ್ನು ನಡೆಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ನೋಯ್ಡಾದಲ್ಲಿ ಗರಿಷ್ಠ 533 ಎಕ್ಯೂಐ ದಾಖಲಾಗಿದ್ದು, ಗ್ರೇಟರ್ ನೋಯ್ಡಾದಲ್ಲಿ 517 ಹಾಗೂ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿ 512 ಎಕ್ಯೂಐ ಮಟ್ಟ ಕಂಡುಬಂದಿದೆ. ಇನ್ನು ದೆಹಲಿಯ ಪ್ರಮುಖ ಭಾಗಗಳಾದ ಸೋನಿಯಾ ವಿಹಾರ್ (525), ಮಾಡಲ್ ಟೌನ್ (523), ಆನಂದ್ ವಿಹಾರ್ (521), ಆನಂದ್ ಪರ್ವತ್ (510) ಮತ್ತು ರೋಹಿಣಿಯಲ್ಲಿ (505) ವಿಷಕಾರಿ ಗಾಳಿಯ ಪ್ರಮಾಣ ತೀವ್ರವಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಹೈಬ್ರಿಡ್ ಶಿಕ್ಷಣ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ.



